MuhurtaNow
Draft, pending review. Not yet listed publicly.

Purandara Dasa Compositions

Purandara Dasa · Traditional devotional text

Compositions

1

ಅನುಗಾಲವು ಚಿಂತೆ ಜೀವಕ್ಕೆ | ತನ್ನ ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರು ಚಿಂತೆ , ಸತಿಯಿಲ್ಲದ ಚಿಂತೆ ಮತಿಹೀನ ಸತಿಯಾದರು ಚಿಂತೆಯು ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ ಮಿತಿಮೇರೆಯಿಲ್ಲದ ಮೋಹದ ಚಿಂತೆಯು ||೧|| ಮಕ್ಕಳಿಲ್ಲದ ಚಿಂತೆ , ಮಕ್ಕಳಾದರು ಚಿಂತೆ ಒಕ್ಕಾಳು ಹೊನ್ನು ಕೊಡುವ ಚಿಂತೆಯು ಅಕ್ಕರೆಯಿಂದಲೆ ತುರುಗಳ ಕಾಯ್ದರು ಕಕ್ಕುಲತೆಯು ಬಿಟ್ಟು ಹೋಗದ ಚಿಂತೆ ||೨|| ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆ ಹಿಡಿಹೊನ್ನು ಕೈಯೊಳಾದರು ಚಿಂತೆಯು ಪೊಡವಿಯೊಳಗೆ ನಮ್ಮ ಪುರಂದರವಿಠಲನ ಬಿಡದೆ ಧ್ಯಾನಿಸಿದರೆ ಚಿಂತೆ ನಿಶ್ಚಿಂತೆ ||೩||

2

ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಗೋಪಾಳ ಬುಟ್ಟಿ ಹಿಡಿಯೊದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ತುಳಸಿ ಮಾಲೆ ಹಾಕುವುದಕ್ಕೆ ಅರಸನಂತೆ ನಾಚುತಲಿದ್ದೆ ಸರಸಿಜಾಕ್ಷ ಪುರಂದರ ವಿಠ್ಠಲ ತುಳಸಿ ಮಾಲೆ ಹಾಕಿಸಿದನಯ್ಯ

3

ಆಚಾರವಿಲ್ಲದ ನಾಲಿಗೆ ನಿನ್ನ, ನೀಚಗುಣವ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಪುದಕ್ಕೆ, ಚಾಚಿ ಕೊಂಡಿರುವಂಥ ನಾಲಿಗೆ, ಇದ್ದಮಾತನಾಡು ನಾಲಿಗೆ ಹಿಡಿ-ದೊದ್ದರೂ ಹುಸಿಬೇಡ ನಾಲಿಗೆ, ಇದ್ದುಕೊಂಡು ಉಣ್ಣು ಅಮೃತಾನ್ನಗಳನು, ಬುದ್ಧಿಯಲಿರು ಕಂಡೆಯ ನಾಲಿಗೆ ಬಡವರ ಮಾತಿಗೆ ನಾಲಿಗೆ - ನೀ ಕಡುಚತುರ ನುಡಿಯದಿರು ನಾಲಿಗೆ ಹಿಡಿದು ಕೊಂಡೊಯ್ವರು ಯಮನ ಭಟರು ನಿನ್ನ ನುಡಿ ಕಂಡೆಯ ಹರಿಯಂದು ನಾಲಿಗೆ ಹರಿಪಾದವೆ ಗತಿಯೆಂದು ನಾಲಿಗೆ - ನಿನಗೆ ಪರರ ಚಿಂತೆಯೇಕೆ ನಾಲಿಗೆ ಸಿರಿವರ ಪುರಂದರ ವಿಠ್ಠಲರಾಯನನು ಮರೆಯದೆ ನೆನೆ ಕಂಡೆಯ ನಾಲಿಗೆ

4

ಆಡಿಸಿದಳೆಶೋದಾ ಜಗದೋದ್ಧಾರನ ಜಗದೋದ್ಧಾರನ ಮಗನೆಂದು ತಿಳಿಯುತ ಮಗುಗಳ ಮಾಣಿಕ್ಯನ ಆಡಿಸಿದಳೆಶೋದಾ ನಿಗಮಕೆ ಸಿಲುಕದ ಅಗಣಿತ ಮಹಿಮನ ಸುಗುಣಾಂತ ರಂಗನ ಆಡಿಸಿದಳೆಶೋದಾ ಅಣೋರಣೀಯನ ಮಹತೋಮಹೀಯನ ಅಪ್ರಮೇಯನ ಆಡಿಸಿದೆಳೆಶೋದಾ ಪರಮ ಪುರುಷನ ಪರವಾಸು ದೇವನ ಪುರಂದರ ವಿಠ್ಠಲನ ಆಡಿಸಿದಳೆಶೋದಾ

5

ಅಂಬಿಗ ನಾ ನಿನ್ನ ನಂಬಿದೆ ಜಗದಂಬರಮಣನ ನಂಬಿದೆ, ತುಂಬಿದ ಹರಿಗೋಲಂಬಿಗ, ಅದಕ್ಕೊಂಬತ್ತು ಛಿದ್ರವು ಅಂಬಿಗ, ಸಂಭ್ರಮದಿಂ ನೋಡಂಬಿಗ, ಅದರಿಂಬು ನೋಡಿ ನಡೆಸಂಬಿಗ, ಹೊಳೆಯ ಭರವ ನೋಡಂಬಿಗ ಅದಕೆ ಸೆಳೆವು ಘನವಯ್ಯ ಅಂಬಿಗ ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದು ಕೊಂಡೊಯ್ಯೊ ಅಂಬಿಗ ಆರು ತೆರೆಯ ನೋಡಂಬಿಗ ಅದು ಮೀರಿ ಬರುತಿದೆ ನೋಡಂಬಿಗ ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗ ನಿತ್ಯಮೂರುತಿ ನಮ್ಮ ಪುರಂದರ ವಿಠ್ಠಲನ ಮುಕ್ತಿ ಮಂಟಪಕೊಯ್ಯೊ ಅಂಬಿಗ

6

ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||ಪ|| ಅಂಬುಜನಾಭನು ದಯದಿಂದ ಎನ್ನ ಮನೆಗೆ ||ಅ.ಪ|| ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿ ಬಂದ ಕುಲನಶ ವನಮಾಸ ನವನೀತ ಚೋರನಿವ ಲಲನೆಯರ ವ್ರತಭಂಗ ವಾಹನತುರಂಗ ||೧|| ಕಣ್ಣು ಬಿಡುವನು ತನ್ನ ಬೆನ್ನ ತಗ್ಗಿಸುವನು ಮಣ್ಣು ಕೊರೆದು ಕೋರೆ ಬಾಯ ತೆರೆದು ಚಿಣ್ಣ ಭಾರ್ಗವ ಲಕ್ಶ್ಮಣಣ್ಣ ಬೆಣ್ಣೆಯ ಕಳ್ಳ ಮನವನ ಬಿಟ್ಟು ಕುದುರೆಯನೇರಿದ ||೨|| ನೀರಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂದ ಕೊರಳುಗೊಯಿಕ ಶರಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರವಿಟಠಲ ಮನೆಗೆ ತಾ ಬಂದ ||೩||

7

ಕರುಣಿಸೋ ರಂಗ ಕರುಣಿಸೋ ಕೃಷ್ಣ ಕರುಣಿಸೋ ರಂಗ ಕರುಣಿಸೋ | ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ || ಪ || ರುಕುಮಾಂಗದನಂತೆ ವ್ರತವ ನಾನರಿಯೆ | ಶುಕಮುನಿಯಂತೆ ಸ್ತುತಿಸಲು ಅರಿಯೆ | ಬಕವೈರಿಯಂತೆ ಧ್ಯಾನವ ಮಾಡಲರಿಯೇ | ದೇವಕಿಯಂತೆ ಮುದ್ದಿಸಲೂ ಅರಿಯೆನೋ || ೧ || ಗರುಡನಂದದಿ ಪೊತ್ತು ತಿರುಗಲು ಅರಿಯೆ | ಕರಿಯಲು ಅರಿಯೆ ಕರಿರಾಜ ನಂತೆ | ವರಕಪಿ ಯಂತೆ ದಾಸ್ಯವ ಮಾಡಲರಿಯೇ | ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ || ೨ || ಬಲಿಯಂತೆ ದಾನವ ಕೊಡಲು ಅರಿಯೆ | ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ | ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ | ಸಲಹೋ ದೇವರ ದೇವ ಶ್ರೀಪುರಂದರವಿಠ್ಠಲ || ೩ ||

8

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು ಕಲ್ಲು ಸಕ್ಕರೆ ಕೊಳ್ಳಿರೊ ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು ಪುಲ್ಲಲೋಚನ ಶ್ರೀ ಕೃಷ್ಣ ನಾಮವೆಂಬ ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ ಉತ್ತಮ ಸರಕಿದು ಅತಿ ಲಾಭ ತರುವಂಥ ಸಂತೆ ಕಂತೆಗೆ ಹೋಗಿ ಶ್ರಮ ಪಡಿಸುವುದಲ್ಲ ಸಂತೆಯೊಳಗೆ ಇದು ಮಾರುವುದಲ್ಲ ಸಂತತ ಭಕ್ತರ ನಾಲಿಗೆ ಸವಿಗೊಂಬ ಕಾಂತ ಪುರಂದರ ವಿಠ್ಠಲ ನಾಮವೆಂಬ

9

ಕೃಷ್ಣಾ ಬಾರೋ , ಕೃಷ್ಣಾ ಬಾರೋ , ಕೃಷ್ಣಯ್ಯ ನೀ ಬಾರಯ್ಯ || ಪಲ್ಲವಿ || ಸಣ್ಣ ಹೆಜ್ಜೆಗಳಿಟ್ಟು , ಗೆಜ್ಜೆ ನಾದಗಳಿಂದ || ಪ || ಮನ್ಮಥ ಜನಕನೆ ಬೇಗನೆ ಬಾರೋ ಕಮಲಾಪತಿ ನೀ ಬಾರೋ ಅಮಿತ ಪರಾಕ್ರಮ ಶಂಕರ ಬಾರೋ ಕಮನೀಯ ಗಾತ್ರನೆ ಬಾರಯ್ಯ ದೊರೆಯೇ || ಪ || ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ ಮೇಲಾದಿ ಭಕ್ಷಗಳ ಮುಚ್ಚಿಟ್ಟು ತರುವೆ , ಜಾಲ ಮಾಡದೆ ನೀ ಬಾರಯ್ಯ ಮರಿಯೇ ಬಾರಾ ಎನ ತಂದೆ ಪುರಂದರ ವಿಠ್ಠಲ || ಪ ||

10

ನಾರಾಯಣಾಯ ನಮೋ ನಾಗೇಂದ್ರಶಯನಾಯ ನಾರದಾದ್ಯಖಿಳ ಮುನಿನಮಿತ ಚರಣಾಂಭೋಜ ಸಾರಿದರೆ ಪೊರೆದ ಕಂಸಾರಿ ರಕ್ಷಿಪುದಿಂದು ಕಾರುಣ್ಯದಿಂದ ಒಲಿದು || ಪ || ಪಾಂಡ್ಯ ದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕದ ಧ್ಯಾನದಿಂ ಮಹಾತಪದೊಳಿರೆ ಚಂಡತಾಪಸ ಅಗಸ್ತ್ಯ | ಹಿಂಡು ಶಿಷ್ಯರವೆರಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯಲಿ ಜನಿಸು ಹೋಗೆನುತ ಉದ್ದಂದಡ ಶಾಪವನಿಟ್ಟು ಮುನಿ ಪೋದನಾಕ್ಷಣದಿ ಶುಂಡಾಲನಾದಸರಸ || ೧ || ಕ್ಷೀರಸಾಗರತಡಿಯ ಐದು ಯೋಜನದ ವಿಸ್ತಾರದಲಿ ವರತ್ರಿಕೂಟಾದ್ರಿ ಶೃಂಗತ್ರಯದ ರಾರಾಜಿಸುತಲಿಪ್ಪರಜತ ತಾಮ್ರ ಧ್ವಜದ ಮೇರುಸಮ ಗಾಂಭೀರ್ಯದಿ | ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭದೊಳಶ್ವತ್ಥಪೂಗ ಪುನ್ನಾಗ ಜಂಬೀರಾದಿ ತರುಗಲ್ಮ ಖಗ ಮೃಗಗಳೆಸೆವಲ್ಲಿ ವಾರಣೇಂದ್ರನು ಮೆರೆದನು || ೨ ||

11

ಗಿಳಿಯು ಪಂಜರದೊಳಿಲ್ಲ ಶ್ರೀ ರಾಮ ಬರಿದೆ ಪಂಜರವಾಯ್ತಲ್ಲ ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ಸಾಕಿ ಅಕ್ಕ ನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ ಮುಪ್ಪಾಗ ಬೆಣ್ಣೆಯನ್ನು ತಪ್ಪದೇ ನಾ ಹಾಕಿ ಸಾಕಿದ ಒಪ್ಪದಿಂದ ಗಿಳಿಯು ಈಗ ತೆಪ್ಪನೆ ಹಾರಿ ಹೋಯಿತಯ್ಯೋ ರಾಮ ಎನ್ನುವ ಗಿಳಿ ಕೋಮಲ ಕಾಯದ ಗಿಳಿ, ಪ್ರೇಮದಿ ಸಾಕಿದ ಗಿಳಿ, ಅಂಗೈಯಲ್ಲಿ ಆಡೋ ಗಿಳಿ, ಮುಂಗೈ ಮೇಲಣ ಗಿಳಿ, ರಂಗ ವಿಠ್ಠಲನಂತೆ, ರಂಗದಿ ಭಜಿಸುವ ಗಿಳಿ

12

ಗುರುವಿನ ಗುಲಾಮನಾಗುವ ತನಕ, ದೊರೆಯದಣ್ಣ ಮುಕುತಿ, ಪರಿ ಪರಿ ಶಾಸ್ತ್ರವನೋದಿದರೇನು, ವ್ಯರ್ಥವಾಯ್ತು ಭಕುತಿ, ಆರು ಶಾಸ್ತ್ರವ ಓದಿದರಿಲ್ಲ, ಮೂರು ಪುರಾಣವ ಮುಗಿಸಿದರಿಲ್ಲ ಸಾರ ನ್ಯಾಯ ಕಥೆಗಳ ಕೇಳಿದರಿಲ್ಲ ಧೀರನಾಗಿ ತಾ ಪೇಳಿದರಿಲ್ಲ, ಕೊರಳೊಳು ಮಾಲೆ ಧರಿಸಿದರಿಲ್ಲ,, ಬೆರಳೊಳು ಜಪಮಣಿ ಎಣಿಸಿದರಿಲ್ಲ, ಮರುಳನಾಗಿ ಶರೀರಕೆ ಬೂದಿ, ಒರೆಸಿಕೊಂಡು ತಾ ತಿರುಗಿದರಿಲ್ಲ, ನಾರಿಯ ಭೋಗ ಅಳಿಸಿದರಿಲ್ಲ, ಶಾರೀರಿಕ ಸುಖವ ಬಿಡಿಸಿದರಿಲ್ಲ, ನಾರದವರದ ಪುರಂದರ ವಿಠ್ಠಲನ ಸೇರಿಕೊಂಡು ತಾ ಪಡೆಯುವ ತನಕ

13

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡುವಿರಿ ಕಣಕ ಕುಟ್ಟೋ ಅಲ್ಲಿಗೆ ಹೋಗಿ ಹಣಕಿ ಇಣಕಿ ನೋಡುವಿರಿ ಕಣಕ ಕುಟ್ಟೋ ಒನಕೆಲಿ ಬಡಿದರೆ ಕಂಞ ಕುಂಞ ಕಂಞ ಕುಂಞ ಮಾಡುವಿರಿ ಹುಗ್ಗಿ ಮಾಡೋ ಅಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ ಹುಗ್ಗಿ ಮಾಡೋ ಸೌಟಲಿ ಬಡಿದರೆ ಕಂಞ ಕುಂಞ ಕಂಞ ಕುಂಞ ಮಾಡುವಿರಿ ಹಿರೇ ಬೀದಿಯಲಿ ಓಡುವಿರಿ ಕರೇ ಬೂದಿಯಲಿ ಹೊರಳುವಿರಿ ಪುರಂದರ ವಿಠ್ಠಲರಾಯನ ಈ ಪರಿ ಮರೆತು ಸದಾ ನೀವು ಚಲಿಸುವಿರಿ

14

ತೇಲಿಸೊ ಇಲ್ಲ ಮುಳುಗಿಸೊ ನಿನ್ನ ಕಾಲಿಗೆ ಬಿದ್ದೇನೊ ಪರಮ ಕೃಪಾಳೊ || ಪ || ಸತಿಸುತ ಧನದಾಸೆ ಎಂದೆಂಬ ಮೋಹದಿ ಹಿತದಿಂದ ಅತಿ ನೊಂದು ಬೆಂಡಾದೆನೊ ( ಗತಿಕೊಡುವರ ಕಾಣೆ ಮತಿಯ ಪಾಲಿಸೊ ) ಲಕ್ಷ್ಮೀ ಪತಿ ನಿನ್ನ ಚರಣದ ಸ್ಮರಣೆ ಇತ್ತೆನಗೆ || ೧ || ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ ಶರಧಿಯೊಳಗೆ ಬಿದ್ದು ಮುಳುಗಿದೆನೊ ಸ್ಥಿರವಲ್ಲ ದೇಹವು ನೆರೆನಂಬಿದೆನು ಸ್ಥಿರವಲ್ಲ ದೇಹವು ನೆರೆನಂಬಿದೆ ನಿನ್ನ ಕರುಣಾಭಯವಿತ್ತು ಪಾಲಿಸೊ ಹರಿಯೆ || ೨ || ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನು ಭಕ್ತಿ ರಸವ ಬಿಟ್ಟು (ಶೇಷಶಯನ ಶ್ರೀ ಪುರಂದರ ವಿಠ್ಠಲನ ) ದಾಸರ ಸಂಗವಿತ್ತು ಪಾಲಿಸೊ ಹರಿಯೆ || ೩ ||

15

ದಾಸನ ಮಾಡಿಕೊ ಎನ್ನ ಸ್ವಾಮಿ ಸಾಸಿರನಾಮದ ವೆಂಕಟರಮಣ || ಪ || ದುರುಬುದ್ಧಿಗಳನೆಲ್ಲ ಬಿಡಿಸೊ ನಿನ್ನ ಕರುಣಕವಚವೆನ್ನ ಹರಣಕ್ಕೆ ತೊಡಿಸೊ | ಚರಣಸೆವೆ ಎನಗೆ ಕೊಡಿಸೊ ಅಭಯ ಕರಪುಷ್ಪವ ಎನ್ನ ಶಿರದಲ್ಲಿ ಮುಡಿಸೊ ||೧|| ದೃಢಭಕ್ತಿ ನಿನ್ನಲ್ಲಿ ಬೇಡಿ ನಾ ಅಡಿಗೆರಗುವೆನಯ್ಯ ಅನುದಿನ ಪಾಡಿ | ಕಡೆಗಣ್ಣಲೆ ಎನ್ನ ನೋಡಿ ಬಿಡುವೆ ಕೊಡು ನಿನ್ನ ಧ್ಯಾನವ ಮನಶುಚಿ ಮಾಡಿ || ೨ || ಮೊರೆಹೊಕ್ಕವರ ಕಾಯ್ವ ಬಿರುದು ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು | ದುರಿತಗಳೆಲ್ಲವ ತರಿದು ಸಿರಿ ಪುರಂದರವಿಠ್ಠಲ ಎನ್ನನು ಪೊರೆದು || ೩ ||

16

ದುಗ್ಗಾಣಿ ಎಂಬೊದು ದುರ್ಜನ ಸಂಘ ದುಗ್ಗಾಣಿ ಬಲು ಕೆಟ್ಟದಣ್ಣ ಆಚಾರ ಹೇಳೋದು ದುಗ್ಗಾಣಿ ಬಲು ನೀಚರ ಮಾಡೋದು ದುಗ್ಗಾಣಿ ನಾಚಿಕೆಯಿಲ್ಲದೆ ಮನೆ ಮನೆ ತಿರುಗಿ ಛೀ ಛೀ ಎನಿಸೋದು ದುಗ್ಗಾಣಿಯಣ್ಣ (ದುಗ್ಗಾಣಿ ಎಂಬೊದು ..) ನೆಂಟತನ ಹೇಳೋದು ದುಗ್ಗಾಣಿ ಬಹುನೆಂಟರನೊಲಿಸುವುದು ದುಗ್ಗಾಣಿ ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು ಕುಂಟನೆನಿಸೋದು ದುಗ್ಗಾಣಿಯಣ್ಣ (ದುಗ್ಗಾಣಿ ಎಂಬೊದು ..) ಮಾನವ ಹೇಳೋದು ದುಗ್ಗಾಣಿ ಮಾನ ಹದೆಗೆಡಿಸೋದು ದುಗ್ಗಾಣಿ ಬಹುಮಾನ ನಿಧಿ ಶ್ರೀ ಪುರಂದರ ವಿಠ್ಠಲನ ಕಾಣಿಸದಿರುವುದು ದುಗ್ಗಾಣಿಯಣ್ಣ (ದುಗ್ಗಾಣಿ ಎಂಬೊದು ..)

17

ದೇವ ಬಂದ ನಮ್ಮಸ್ವಾಮಿ ಬಂದಾನೋ | ದೇವರ ದೇವಶಿಖಾಮಣಿ ಬಂದಾನೋ || ಪ || ಉರಗಶಯನ ಬಂದ ಗರುಡಗಮನ ಬಂದ | ನರಗೊಲಿದವ ಬಂದ ನಾರಾಯಣ ಬಂದಾನೋ || ೧ || ಮಂದರೊದ್ಧಾರ ಬಂದ ಮಾಮನಹರ ಬಂದ | ಬೃಂದಾವನಪತಿ ಗೋವಿಂದ ಬಂದಾನೋ || ೨ || ನಕ್ರಹರನು ಬಂದ ಚಕ್ರಧರನು ಬಂದ | ಅಕ್ರೂರಗೊಲಿದ ತ್ರಿವಿಕ್ರಮ ಬಂದಾನೋ || ೩ || ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ | ಅಕ್ಷಯಫಲದ ಶ್ರೀಲಕ್ಷ್ಮಿರಮಣ ಬಂದಾನೊ || ೪ || ನಿಗಮಗೋಚರ ಬಂದ ನಿತ್ಯತೃಪ್ತನು ಬಂದ | ನಗೆಮುಖ ಪುರಂದರವಿಠ್ಠಲ ಬಂದಾನೋ || ೫ ||

18

ನಾ ಮಾಡಿದ ಕರ್ಮ ಬಲವಂತವಾದರೆ ನೀ ಮಾಡುವುದೇನೋ ದೇವ ಸಾಮಾನ್ಯವಲ್ಲಿದು ಬ್ರಹ್ಮ ಬರೆದ ಬರಹ ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ ಪರ ಸತಿಯರ ಸಂಘಗಳ ಬಿಟ್ಟವನಲ್ಲ ಮತಿಹೀನ ನಾನಾಗಿ ಮರುಳಾಗಿದ್ದೆನೊ ದೇವ ಗತಿಯಾವುದಿನ್ನು ಗರುಡ ಗಮನ ಕೃಷ್ಣ ಅನ್ನಪಾನಂಗಳಿಗೆ ಅಗ್ರಗಣ್ಯನಾಗಿ ಸ್ನಾನ ಸಂಧ್ಯಾದಿ ಜಪ ತಪವ ನೀಗಿ ದಾನವಾಂತಕ ನಿನ್ನ ಧ್ಯಾನವ ಮಾಡದೆ ಶ್ವಾನನಂತೆ ಮನೆ ಮನೆ ತಿರುಗತಲಿದ್ದೆ ಇನ್ನಾದರೂ ನಿನ್ನ ದಾಸರ ಸಂಘವಿತ್ತು ಮನ್ನಿಸಿ ಸಲಹಯ್ಯ ಮನ್ಮಥ ಜನಕ ಅನ್ಯರೊಬ್ಬರ ಕಾಣೆ ಆಧರಿಸುವರಿಲ್ಲ ಪನ್ನಗಶಯನ ಪುರಂದರ ವಿಠ್ಠಲ

19

ನಾ ನಿನ್ನ ಧ್ಯಾನದೊಳಿರಲು ಮಿಕ್ಕ ಹೀನ ಮಾನವರೇನು ಮಾಡಬಲ್ಲರೊ ರಂಗ ಮತ್ಸರಿಸುವರೆಲ್ಲ ಕೂಡಿ ಮಾಡುವರೇನು ಅಚ್ಯುತ ನಿನ್ನ ದಯೆಯೆನ್ನೊಳಿರಲು ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೊ ರಂಗ ಧೂಳಿಲಿ ಕುದುರೆ ವೈಯಾರದಿ ಕುಣಿಯಲು ಧೂಳು ರವಿಯ ಮೇಲೆ ಮುಸುಕುವುದೆ ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ಗಾಳಿಗೆ ಗಿರಿಯು ಅಲ್ಲಾಡಬಲ್ಲದೆ ಕನ್ನಡಿಯೊಳಗಣ ಗಂಟು ಕಂಡು ಕಳ್ಳ ಕನ್ನವಿಕ್ಕಲವನ ವಶವಹುದೆ ನಿನ್ನ ನಂಬಲು ಮುದ್ದು ಪುರಂದರ ವಿಠ್ಠಲ ಚಿನ್ನಕ್ಕೆ ಪುಟವನಿಟ್ಟಂತೆ ಅಹುದೋ ರಂಗ

20

ನೀನ್ಯಾಕೊ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದಿದ್ದರೆ ಸಾಕೋ || ಪ || ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ ಆದಿ ಮೂಲನೆಂಬ ನಾಮವೆ ಕಾಯ್ತೋ || 1 || ಪ್ರಹ್ಲಾದನ ಪಿತ ಬಾಧಿಸುತಿರುವಾಗ ನರಹರಿಯೆಂಬ ನಾಮವೆ ಕಾಯ್ತೋ || ೨ || ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತೋ || ೩ || ಯಮನ ದೂತರು ಬಂದು ಅಜಾಮಿಳನೆಳೆವಾಗ ನಾರಾಯಣನೆಂಬ ನಾಮವೆ ಕಾಯ್ತೋ || ೪ || ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ನಾಮ ಎಂಬ ನಾಮವೆ ಕಾಯ್ತೋ || ೫ || ಹಸುಳೆ ಆ ಧ್ರುವರಾಯ ಅಡವಿಗೆ ಪೋವಾಗ ವಾಸುದೇವನೆಂಬೊ ನಾಮವೆ ಕಾಯ್ತೋ || ೬ || ನಿನ್ನ ನಾಮಕೆ ಸರಿ ಕಾಣೆನು ಜಗದೊಳು ಘನ ಮಹಿಮ ಸಿರಿ ಪುರಂದರ ವಿಠಲ || ೭ ||

21

ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ ಭಾಗವತರು ಕಂಡರೆತ್ತಿಕೊಂಡೊಯ್ವರೊ ಸುರಮುನಿಗಳು ತಮ್ಮ ಹೃದಯ ಗಹ್ವರದಲ್ಲಿ ಪರಮಾತ್ಮನ ಕಾಣದೆ ಅರಸುವರು ದೊರಕದ ವಸ್ತುವು ದೊರಕಿತು ತಮಗೆಂದು ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ ಹಗೆಯಾಗಿ ನೋಡ್ವರೋ ಗೋಪಾಲನೆ ಮಗುಗಳ ಮಾಣಿಕ್ಯ ತಗುಲಿತು ಕರಕೆಂದು ವೇಗದಿಂದಲಿ ಬಂದು ಬಿಗಿದಪ್ಪಿಕೊಂಬರು ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು ಅಟ್ಟಟ್ಟಿ ಬೆನ್ನಿಂದೆ ತಿರುಗುವರು ಸೃಷ್ಟೀಶ ಪುರಂದರ ವಿಠ್ಠಲ ರಾಯಗೆ ಇಷ್ಟಿಷ್ಟು ಬೆಣ್ಣೆಯ ಕೊಟ್ಟೆನೋ ರಂಗಯ್ಯ

22

ಪಾಲಿಸೆನ್ನನು ಶ್ರೀಮಹಾಲಕ್ಷ್ಮೀ, ಪಾಲಿಸೆನ್ನನು ಪಾಲಾಬ್ಧಿ ಸಂಜಾತೆ ಲಲಿತಾಂಗಿ ಶುಭೇದೇವಿ ಮಂಗಳೆದೇವಿ ||ಪ|| ವೇದಾಭಿಮಾನಿ ಸಾರಸಾಕ್ಷಿ ಶ್ರೀಧರ ರಮಣಿ ಕಾದುಕೋ ನಿನ್ನಯ ಪಾದಸಿವಕರನ್ನು ಆದಿ ಶಕ್ತಿ ಸರ್ವಾದಾರ ಗುಣ ಪೂರ್ಣೆ ||೧|| ದಯದಿಂದ ನೋಡೆ ಭಜಿಪ ಭಕ್ತರ ಭಯ ದೂರ ಮಾಡೆ ದಯ ಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ ಜಯದೇವಿ ಸುವ್ರತೆ ಹಯವದನನ ಪ್ರೀತೆ ||೨|| ನೀನಲ್ಲದೇಅನ್ಯ ರಕ್ಷಿಪರನು ಕಾಣೆ ನಾ ಮುನ್ನ ದಾನವಾಂತಕ ಸಿರಿ ಪುರಂದರ ವಿಠ್ಠಲನ ದ್ಯಾನಿಪ ಭಕುತರ ಮಾನ ನಿನ್ನದು ತಾಯೆ ||೩||

23

ಯಾದವ ನೀ ಬಾ ಯದುಕುಲ ನಂದನ ಮಾಧವ ಮಧುಸೂದನ ಬಾರೊ ||ಪ|| ಸೋದರಮಾವನ ಮಧುರೆಲಿ ಮಡುಹಿದ ಯ- ಶೋದೆ ನಂದನ ನೀ ಬಾರೊ ||೧|| ಕಣಕಾಲಂದುಗೆ ಘಲುಘಲುರೆನುತಲಿ ಝಣಝಣ ವೇಣುನಾದದಲಿ ಚಿಣಿಕೋಲ್ ಚೆಂಡು ಬುಗುರಿಯನಾಡುತ ಸಣ್ಣ ಸಣ್ಣ ಗೋವಳರೊಡಗೂಡಿ ||೨|| ಶಂಖ ಚಕ್ರವು ಕೈಯಲಿ ಹೊಳೆಯುತ ಬಿಂಕದ ಗೋವಳ ನೀ ಬಾರೊ ಅಕಳಂಕ ಚರಿತನೆ ಆದಿನಾರಾಯಣ ಬೇಕೆಂಬ ಭಕ್ತರಿಗೊಲಿ ಬಾರೊ ||೩|| ಖಗವಾಹನನೆ ಬಗೆಬಗೆಯಿಂದಲಿ ನಗೆಮೊಗದರಸನೆ ನೀ ಬಾರೊ ಜಗದೊಳು ನಿನ್ನಯ ಮಹಿಮೆಯ ಪೊಗಳುವೆ ಪುರಂದರವಿಟ್ಠಲ ನೀ ಬಾರೊ ||೪||

24

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ||ಪ|| ಬಾಯಾರಿತು ಎಂದು ಬಾವಿನೀರಿಗೆ ಪೋದೆ ಬಾವಿಲಿ ಜಲ ಬತ್ತಿ ಬರಿದಾಯ್ತು ಹರಿಯೆ ||೧|| ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ ಮರ ಬಗ್ಗಿ ಶಿರದ ಮೇಲೊರಗಿತೋ ಹರಿಯೆ ||೨|| ಅಡವಿಯೊಳ್ಮನೆ ಮಾಡಿ ಗಿಡಕೆ ತೊಟ್ಟಿಲು ಕಟ್ಟಿ ತೊಟ್ಟಿಲಿನ ಶಿಶು ಮಾಯವಾಯಿತು ಹರಿಯೆ ||೩|| ತಂದೆ ಶ್ರೀ ಪುರಂದರವಿಠಲ ನಾರಾಯಣ ನಾ ಸಾಯೋ ಹೊತ್ತಿಗೆ ನೀ ಕಾಯೋ ಹರಿಯೆ ||೪||

25

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ | ವಿಠ್ಠಲ ನಾಮ ತುಪ್ಪವ ಸೇರಿಸಿ ಬಾಯಿ ಚಪ್ಪರಿಸಿರೋ ||ಪ|| ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ | ಸುಮ್ಮಾನೆ ಸಜ್ಜಿಗೆ ತೆಗೆದು ಗಮ್ಮಾನೆ ಶಾವಿಗೆ ಹೊಸೆದು ||೧|| ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರಲಿ | ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು ||೨|| ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ | ಆನಂದ ಮೂರುತಿ ನಮ್ಮ ಪುರಂದರ ವಿಠ್ಠಲನ ನೆನೆಯಿರೊ ||೩||

26

ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ||ಪ|| ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ||ಅಪ|| ನಿಟಿಲ ನೇತ್ರನೆ ದೇವಿ ಸುತನೆ ನಾಗಭೂಷಣ ಪ್ರಿಯನೆ | ತಟಿಲತಾಂಕಿತ ಕೋಮಲಾಂಗನೆ ಕರ್ಣಕುಂಡಲಧಾರನೆ ||೧|| ಬಟ್ಟ ಮುತ್ತಿನ ಪದಕಹಾರನೆ ಬಾಹುಹಸ್ತಚತುಷ್ಟನೆ | ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಶಧಾರನೆ ||೨|| ಕುಕ್ಷಿಮಹಾಲಂಬೋದರನೆ ಇಕ್ಷುಛಾಪನ ಗೆಲಿದನೆ | ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜ ದಾಸನೆ ||೩||

27

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ ನರ ಚಿತ್ತಕೆ ಬಂದದ್ದು ಲವಲೇಶ ನಡೆಯದು ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ ಮದುವ್ಯಾಗದಿರುವುದು ಹರಿ ಚಿತ್ತವಯ್ಯ ಕುದುರೆ ಅಂದಣ ಆನೆ ಬಯಸೋದು ನರ ಚಿತ್ತ ಪಾದಚಾರಿ ಆಗೋದು ಹರಿ ಚಿತ್ತವಯ್ಯ ಸದಾ ಅನ್ನದಾನವ ಬಯಸೋದು ನರ ಚಿತ್ತ ಉದರಕೆ ಅಳುವುದು ಹರಿ ಚಿತ್ತವಯ್ಯ ಪುರಂದರ ವಿಠ್ಠಲನ ಬಯಸೋದು ನರ ಚಿತ್ತ ದುರಿತವ ಕಳೆವುದು ಹರಿ ಚಿತ್ತವಯ್ಯ

28

ಹರಿ ಸ್ಮರಣೆ ಮಾಡೊ ನಿರಂತರ ಪರಗತಿಗೆ ಇದು ನಿರ್ಧಾರ ದುರಿತ ಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕಾ ಪಾವನ ನೀ ||೧|| ಶ್ರೀಶ ಪುರಂದರ ವಿಠ್ಠಲ ರಾಯನ ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ ||೨||

29

ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ । ಸೌಭಾಗ್ಯದ ಲಕ್ಷ್ಮೀ ಬಾರಮ್ಮ ॥ಪ॥ ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ತೋರುತ । ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥೧॥ ಕನಕವೃಷ್ಟಿಯ ಕರೆಯುತ ಬಾರೆ ಮನ ಕಾಮನೆಯ ಸಿದ್ಧಿಯ ತೋರೆ । ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ ಬಾರಮ್ಮ ॥೨॥ ಅತ್ತಿತ್ತಳಗದೆ ಭಕ್ತರ ಮನೆಯಲಿ ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ । ಸತ್ಯವ ತೋರುವ ಸಾಧು ಸಜ್ಜನರ ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ॥೩॥ ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ । ಕುಂಕುಮಾಂಕಿತ ಪಂಕಜಲೋಚನೆ ವೆಂಕಟರಮಣನ ಬಿಂಕದ ರಾಣಿ ॥೪॥ ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ । ಅಕ್ಕರೆವುಳ್ಳ ಅಳಗಿರಿ ರಂಗನ ಚೊಕ್ಕ ಪುರಂದರ ವಿಠ್ಠಲನ ರಾಣಿ ॥೫॥

30

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ|| ಅನ್ನದಾನವ ಮಾಡುವರಾಗಿ ಅನ್ನ ಛತ್ರವನ್ನಿಟ್ಟವರಾಗಿ ಅನ್ಯ ವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧|| ಮಾತಾಪಿತೃಗಳ ಸೇವಿಪರಾಗಿ ಪಾಪ ಕಾರ್ಯದ ಬಿಟ್ಟವರಾಗಿ ಜಾತಿಯಲಿ ಮಿಗಿಲಾದವರಾಗಿ ನೀತಿ ಮಾರ್ಗದಲಿ ಖ್ಯಾತರಾಗಿ ||೨|| ಗುರು ಕಾರುಣ್ಯವ ಪಡೆದವರಾಗಿ ಗುರುವಿನ ಮರ್ಮವ ತಿಳಿದವರಾಗಿ ಗುರುವಿನ ಪಾದವ ಸ್ಮರಿಸುವರಾಗಿ ಪರಮ ಪುಣ್ಯವ ಮಾಡುವರಾಗಿ ||೩|| ಶ್ರೀನಿವಾಸನ ಸ್ಮರಿಸುವರಾಗಿ ಪ್ರಾಣರಾಯನ ದಾಸರಾಗಿ ದಾನಕೆಂದು ಬಲು ಹೆದರಿ ಇಂಥ ದೀನವೃತ್ತಿಯಲಿ ಹೀನರಾಗಿ ||೪|| ಪಕ್ಷಮಾಸ ವ್ರತ ಮಾಡುವರಾಗಿ ಪಕ್ಷಿವಾಹನಗೆ ಪ್ರಿಯರಾಗಿ ಕುಕ್ಷಿಲಿ ಕಲ್ಮಷ ಇಲ್ಲದವರಾಗಿ ಭಿಕ್ಷುಕರು ಅತಿ ತುಚ್ಛರಾಗಿ ||೫|| ವೇದ ಪುರಾಣದ ತಿಳಿದವರಾಗಿ ಮೇದಿನಿಯಾಳುವಂಥವರಾಗಿ ಸಾಧು ಧರ್ಮವಾಚರಿಸುವರಾಗಿ ಓದಿ ಗ್ರಂಥಗಳ ಪಂಡಿತರಾಗಿ ||೬|| ಆರು ಮಾರ್ಗವ ಅರಿತವರಾಗಿ ಮೂರು ಮಾರ್ಗವ ತಿಳಿದವರಾಗಿ ಭೂರಿ ತತ್ತ್ವವ ಬೆರೆದವರಾಗಿ ಕ್ರೂರರ ಸಂಗವ ಬಿಟ್ಟವರಾಗಿ ||೭|| ಕಾಮ ಕ್ರೋಧವ ಅಳಿದವರಾಗಿ ನೇಮ ನಿಷ್ಠೆಗಳ ಮಾಡುವರಾಗಿ ಆ ಮಹಾಪದವಿಲಿ ಸುಖಿಸುವರಾಗಿ ಪ್ರೇಮದಿ ಕುಣಿ ಕುಣಿದಾಡುವರಾಗಿ ||೮|| ಸಿರಿ ರಮಣನ ಸದಾ ಸ್ಮರಿಸುವರಾಗಿ ಗುರುತಿಗೆ ಬಾಹೋರಂಥವರಾಗಿ ಕರೆಕರೆ ಸಂಸಾರ ನೀಗುವರಾಗಿ ಪುರಂದರವಿಠಲನ ಸೇವಿಪರಾಗಿ ||೯||

31

ಮೋಸ ಹೋದೆನಲ್ಲಾ ತಿಳಿಯದೆ ಮೋಸ ಹೋದೆನಲ್ಲಾ ||ಪ|| ಕ್ಲೇಶಪಾಶವನು ನಾಶಮಾಡುವ ಶ್ರೀಶನಂಘ್ರಿಗಳ ಲೇಸಾಗಿ ಸ್ಮರಿಸದೆ ||೧|| ಕಾಯದಾಶೆಯಿಂದ ಕಂಡದ್ದು ಬೇಡಿ ಶ್ವಾನನಂತೆ ಮಾಯಪಾಶದಲಿ ಸಿಲುಕಿ ನಾನು ಮಾರಮಣನೆ ನಿನ್ನ ಧ್ಯಾನಮಾಡದೇ ||೨|| ಪುಷ್ಪ ಜಾಜಿಗಳನು ಮಲ್ಲಿಗೆ ಭಕ್ತಿಭಾವದಿಂದ ತಂದು ಕೃಷ್ಣಾವತಾರನ ಪೂಜೆಯ ಮಾಡಿ ವಿಷ್ಣುಲೋಕವನು ಸೂರೆಗೊಳ್ಳದೆ ||೩|| ಸತಿಸುತಾದಿ ಬಂಧುಬಳಗ ಹಿತವ ನುಡಿವರ್ಯಾರೋ ಗತಿ ನೀನೆ ತಂದೆತಾಯಿ ನೀನೆ ಸದ್ಗತಿ ಈಯೋ ಪುರಂದರವಿಟ್ಠಲ ||೪||

32

ಯಮನೆಲ್ಲೋ ಕಾಣೆನೆಂದಹೇಳಬೇಡ ಯಮನೆ ಶ್ರೀರಾಮನು ಸಂದೇಹ ಬೇಡ ||ಪ|| ನಂಬಿದ ವಿಭೀಷಣಗೆ ರಾಮನಾದ ನಂಬದಿದ್ದ ರಾವಣಗೆ ಯಮನಾದ ||೧|| ನಂಬಿದ ಅರ್ಜುನನಿಗೆ ಭೃತ್ಯನಾದ ನಂಬದ ದುರ್ಯೋಧನನಿಗೆ ಮೃತ್ಯುವಾದ ||೨|| ನಂಬಿದ ಪ್ರಹ್ಲಾದನಿಗೆ ಹರಿಯಾದ ನಂಬದ ಹಿರಣ್ಯಕನಿಗೆ ಉರಿಯಾದ ||೩|| ನಂಬಿದ ಉಗ್ರಸೇನಗೆ ಮಿತ್ರನಾದ ನಂಬದಿದ್ದ ಕಂಸನಿಗೆ ಶತ್ರುವಾದ ||೪|| ನಂಬಿಕೊಳ್ಳಿ ಬೇಗ ಶ್ರೀಕೃಷ್ಣದೇವನ ಕಂಬು ಚಕ್ರಧಾರಿ ಪುರಂದರವಿಠಲನ ||೫||

33

ಯಾಕೆ ನಿರ್ದಯನಾದೆ ಎಲೊ ದೇವನೆ ಶ್ರೀಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ ||ಪ|| ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು ಹಿಂಗದೆ ಪ್ರಹ್ಲಾದನಪ್ಪಿಕೊಂಡೆ ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆ ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ ||೧|| ಸಿರಿದೇವಿಗೆ ಹೇಳದೆ ಸೆರಗು ಸಂವರಿಸದೆ ಗರುಡನ ಮೇಲೆ ಗಮನವಾಗದೆ ಭರದಿಂದ ನೀ ಬಂದು ಕರಿಯನುದ್ಧರಿಸಿದೆ ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ ||೨|| ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ ಭಜನೆಗವರೇ ಹಿತರೆ ನಾ ನಿನಗೆ ಅನ್ಯನೆ ತ್ರಿಜಗಪತಿ ಸಲಹೆನ್ನ ಪುರಂದರವಿಠಲ ||೩||

34

ಯಾಕೆನ್ನೋಳಿನಿತು ಕೃಪೆಯಿಲ್ಲ ಹರಿಯೆ ಕಾಕುಮಾಡದೆ ಕಾಯೊ ಭವದೊಳಗೆ ಬಳಲಿದೆನು ||ಪ|| ಕಂದರ್ಪ ಬಾಧೆಯಿಂ ಮಾನಿನಿಯ ವಶನಾಗಿ ಮಂದಮತಿಯಿಂದ ಬಲು ಮರುಳಾದೆನೊ ಸಂದಿತೈ ಯೌವನವು ಬುದ್ಧಿ ಬಂದಿತು ಈಗ ಸಂದೇಹಪಡದೆ ನೀ ಕರುಣಿಸೈ ಎನ್ನ ||೧|| ಹೆಂಡತಿಯು ಕಡೆಗಣ್ಣಿನಿಂದ ನೋಡುವಳೀಗ ಹಿಂಡು ಮಕ್ಕಳು ಎನ್ನ ಕಾಡುತಿಹರು ಮುಂಡಮೋಚಿದೆ ನಾನು ಇನ್ನಾರು ಗತಿ ಎನಗೆ ಪುಂಡರೀಕಾಕ್ಷ ನೀ ಕರುಣಿಸೈ ಎನ್ನ ||೨|| ಅಟ್ಟ ಮೇಲೆ ಒಲೆಯು ಉರಿವಂತೆ ಎನಗೀಗ ಕೆಟ್ಟ ಮೇಲೆ ಅರಿವು ಬಂದಿತಯ್ಯ ನೆಟ್ಟನೆ ಪುರಂದರವಿಠಲನೆ ಕೈ ಬಿಡದೆ ದೃಷ್ಟಿಯಿಂದಲಿ ನೋಡಿ ಪರಿಪಾಲಿಸಯ್ಯ ||೩||

35

ಯಾರೆ ಬಂದವರು ಮನೆಗೆ ಮತ್ಯಾರೆ ಬಂದವರು ನಾರಾಯಣ ಕೃಷ್ಣ ನಾಥನಲ್ಲದೆ ಬೇರೆ ||ಪ|| ವಜ್ರರೇಖೆಗಳಿವೆ ಮನೆಯಲ್ಲಿ ಕಾಲ ಗೆಜ್ಜೆ ಧ್ವನಿ ಕೇಳಿ ಬರುತಿದೆ ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ ||೧|| ಕೊಂಬು ಕೊಳಲು ರಭಸಗಳಿವೆ ಕದಂಬ ಕಸ್ತೂರಿ ಪೆಂಪೆಸೆದಿವೆ ಪೂಂಬಟ್ಟೆ ಚಲ್ಲಣ ಚಲ್ಲಿದೆ ಹಾಲು ಕುಂಭ ಒಡೆದು ಮನೆತುಂಬ ಬೆಳ್ಳಗಾಯಿತು ||೨|| ಮಿಂಚು ಹುಳದಂತೆ ಹೊಳೆವುತ ತಮ್ಮ ಸಂಚರರೊಡಗೂಡಿ ಚಲಿಸುತ್ತ ವಂಚಿಸಿ ಬೆಣ್ಣೆಯ ಮೆಲ್ಲುತ ನಮ್ಮ ಲಂಚದ ಪುರಂದರವಿಠಲನಲ್ಲದೆ ಬೇರೆ ||೩||

36

ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ ||ಪ|| ವೆಂಕಟರಮಣನೆ ಬಾರೋ ಪಂಕಜ ಚರಣವ ತೋರೋ ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿ ರವದಿಂದ ||೧|| ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ ಪನ್ನಗಶಯನನೆ ನಿನ್ನ ಚಿನ್ನದ ಸರ ಹೊಳೆವುತ್ತ ಬಾರೋ ||೨|| ಬಡನಡುವಿನ ಘಂಟೆ ಬಳುಕಿ ಢಣಢಣಿಸುತ್ತ ಕಡಗ ಕಾಲಂದುಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತ ಬಾರೋ ||೩|| ಮುಂಗುರುಳಿನ ಸೊಬಗಿನಿಂದ ರಂಗ ನಿನ್ನ ಫಣೆಯೊಳಿಟ್ಟ ರಂಗು ಮಾಣಿಕ್ಯದರಳೆಲೆ ತೂಗಿ ತೂಗಿ ಓಲಾಡುತ್ತ ಬಾರೋ ||೪|| ಕೊರಳಿಗಹಾಕಿದ ಹುಲಿಯುಗುರು ತೋರಮುತ್ತಿನ ಹಾರಂಗಳ್ಹೂಳೆಯುತ್ತ ಪರಿಪರಿ ವಿಧಗಳಿಂದ ಪುರಂದರವಿಠಲ ಬಾರೋ ||೫||

37

ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ ||ಪಲ್ಲವಿ|| ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು ಅಕ್ಷಿ ತೆರೆದು ಬೇಗ ಈಕ್ಷಿಸೆಂದು ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸುಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ ||೧|| ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕೈಮುಗಿದು ಓಲೈಪರು ಘನ ಶುಕ ಶೌನಕ ವ್ಯಾಸ ವಾಲ್ಮೀಕರು ನೆನೆದು ಕೊಂಡಾಡುವರೊ ಹರಿಯೆ || ೨ || ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದುದಯಾಚಲದಲಿ ನಿಂದ ಕಿರಣ ತೋರುವ ಭಾಸ್ಕರನು ಶ್ರೀಹರಿಯೆ |೩ || ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಮನೆಯೊಳಗೆ ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ || ೪ || ಮುರಮಥನನೆ ನಿನ್ನ ಚರಣದ ಸೇವೆಯ ಕರುಣಿಸಬೇಕೆಂದು ತರುಣಿಯರು ಪರಿಪರಿಯಿಂದಲಿ ಸ್ಮರಿಸಿ ಹಾರೈಪರು ಪುರಂದರವಿಠಲ ನೀನೇಳೊ ಹರಿಯೆ || ೫ ||

38

ಎಷ್ಟೆಷ್ಟು ಜನ್ಮವ ಕಳೆದೆನೊ ಇನ್ನೆಷ್ಟು ಜನ್ಮವ ಕಳೆವೆನೊ ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟು ಇಷ್ಟವ ಪಾಲಿಸೊ ಇಭರಾಜವರದನೆ ||೧|| ಬಾಲತನದಿ ಬಹು ನೊಂದೆನೊ ನಾನಾ ಲೀಲೆಯಿಂದಲಿ ಕಾಲಕಳೆದೆನೊ ಲೋಲಲೋಚನ ಎನ್ನ ಮೊರೆ ಕೇಳುತ ಬೇಗ ಜಾಲವ ಮಾಡದೆ ಪಾಲಿಸೊ ನರಹರಿ ||೨|| ಮುದುಕನಾಗಿ ಚಿಂತೆಪಡುವೆನೊ ನಾ ಕದಡು ದುಃಖ ಪಡಲಾರೆನೊ ಉದಧಿಶಯನ ಶ್ರೀ ಪುರಂದರವಿಠಲ ಮುದದಿಂದ ರಕ್ಷಿಸೊ ಖಗರಾಜ ಗಮನ ||೩||

39

ಗಜವದನ ಬೇಡುವೆ ಗೌರಿ ತನಯ ತ್ರಿಜಗ ವಂದಿತನೆ ಸುಜನರ ಪೊರೆವನೆ ಗಜವದನ ಬೇಡುವೆ ||ಪ|| ಪಾಶಾಂಕುಶಧರ ಪರಮ ಪವಿತ್ರ ಮೂಷಕ ವಾಹನ ಮುನಿ ಜನ ಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೊ ಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರ ವಿಠ್ಠಲನ ನಿರತ ನೆನೆಯುವಂತೆ ವರ ದಯ ಮಾಡೊ ||೩||

40

ಬಂದದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು ದುರುಳ ಕೌರವ ಬಂದು ಅತಿ ಹರುಷದಲಿರುತರಿಲಂದು ಹರಿ ಕೃಪೆ ಅವರಲ್ಲಿದ್ದ ಕಾರಣ ಘೋರ ದುರಿತ ಬಯಲಾದುದಲ್ಲವೆ ಆರು ಒಲಿಯದರಿಲೆನ್ನ ಮುರಾರಿ ಎನಗೆ ಪ್ರಸನ್ನ ಹೋರುವ ದುರಿತ ಬನ್ನ ಅದ ನಿವಾರಿಪ ಕರುಣ ಸಂಪನ್ನ ಸಿರಿ ರಮಣನ ಸಿರಿಚರಣ ಶರಣರಿಗೆ ಕ್ರೂರ ಯಮನು ಶರಣಾಗತನಲ್ಲವೆ ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ ರಂಗನ ದಯೆವುಳ್ಳವಗೆ ಭವ ಭಂಗಗಳೇತಕ್ಕವಗೆ ಮಂಗಳಮಹಿಮ ಪುರಂದರ ವಿಠ್ಠಲ ಶುಭಾಂಗನ ದಯವೊಂದಿದ್ದರೆ ಸಾಲದೆ

41

ಯಾಕೆ ಚಿಂತಿಸುತಿದ್ದಿ ಕೋತಿಮನವೆ ಲೋಕನಾಥನ ನೆನೆದು ಸುಖಿಯಾಗು ಮನವೆ || ಪ|| ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು ಕಟ್ಟಕಡೆಯಲಿ ಲಯಕೆ ಯಾರ ಚಿಂತೆ ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ || ೨ || ನವಿಲಿಗೆ ಚಿತ್ರಪತ್ರವನಾರು ಬರೆದವರು ಪವಳದ ಲತೆಗೆ ಕೆಂಪಿಟ್ಟವರು ಯಾರು ಸವಿಮಾತಿನರಗಿಣಿಗೆ ಹಸುರು ಬಳಿದವರಾರು ಅವ ಮಾಡಿದವ ನಮ್ಮ ಮರೆತಿಹನೆ ಮರುಳೆ || ೩ || ಬಸುರೊಳಗೆ ಶಿಶುವನು ಅದಾರು ಸಲಹಿದವರು ವಸುಧೆಯನು ಬಸುರೊಳಗೆ ಇಟ್ಟವರು ಯಾರು ಹಸಗೆಡದೆ ನಮ್ಮ ಶ್ರೀ ಪುರಂದರವಿಠಲನ ಬಿಸಜಪಾದವ ನಂಬಿ ಸುಖಿಯಾಗು ಮರುಳೆ || ೪ ||

42

ಯಾಕೆ ಮೂರ್ಖನಾದ್ಯೋ ಮನುಜ ಯಾಕೆ ಮೂರ್ಖನಾದ್ಯೋ ||ಪ|| ಯಾಕೆ ಮೂರ್ಖನಾದ್ಯೋ ನೀನು ಕಾಕುಬುದ್ಧಿಯನ್ನು ಬಿಟ್ಟು ಲೋಕನಾಥನನ್ನು ನೆನೆ ಕಂಡ್ಯ ಮನುಜ ||೧|| ಸಾಧು ಸಜ್ಜನ ಸಂಗ ಮಾಡು ಭೇದಾಭೇದ ತಿಳಿದು ನೋಡು ವಾದ ಬುದ್ಧಿ ಮಾಡುವರೇನೋ ಮನುಜ ||೨|| ದಾನ ಧರ್ಮವನ್ನು ಮಾಡು ಜ್ಞಾನದಿಂದ ತಿಳಿದು ನೋಡು ಹೀನಬುದ್ಧಿ ಮಾಡುವರೇನೋ ಮನುಜ || ೩ || ಮಕ್ಕಳು ಹೆಂಡಿರು ತನ್ನವರೆಂದು ರೊಕ್ಕವನ್ನು ಗಳಿಸಿಕೊಂಡು ಸೊಕ್ಕಿನಿಂದ ತಿರುಗುವರೇನೋ ಮನುಜ ||೪|| ಅಂತಕನ ದೂತರು ಬಂದು ಕಂತೆ ಕಟ್ಟು ಹೊರಡು ಎಂದು ನಿಂತರೆಲ್ಲರು ಬಿಡಿಸುವರೇನೋ ಮನುಜ ||೫|| ಅರಿಷಡ್ವರ್ಗದ ಆಟವ ಬಿಟ್ಟು ಪುರಂದರವಿಠಲನ ಧ್ಯಾನದೊಳಿಟ್ಟು ಪರಗತಿ ದಾರಿಯ ನೋಡೋ ಮನುಜ || ೬ ||

43

ಯಾದವ ನೀ ಬಾ ಯದುಕುಲನಂದನ ಮಾಧವ ಮಧುಸೂದನ ಬಾರೊ || ಪ || ಸೋದರಮಾವನ ಮದುರಲಿ ಮಡಹಿದ ಯಶೋದೆ ಕಂದೆ ನೀ ಬಾರೊ || ಅ. ಪ. || ಕನಕಾಲಂದಗಿ ಘುಲು ಘುಲು ಯೆನುತಲಿ ಝಣಝಣ ವೆನುತಿಹ ನಾದಗಳು | ಚಿಣಿಕೊಳು ಚೆಂಡು ಬುಗರೆಯನಾಡುತ ಸಣ್ಣ ಸಣ್ಣ ಗೊವಳರೊಡಿ ಬಾರೊ || ೧ || ಶಂಖ ಚಕ್ರವು ಕೈಯಲಿ ಹೊಳಿಯುತ ಬಿಂಕದ ಕೋವಲ ನೀ ಬಾರೊ | ಅಕಳಂಕ ಮಹಿಮನೆ ಆದಿನಾರಾಯಣ ಬೇಗಂಪೆ ಭಕುತರಿಗೊಲಿ ಬಾರೊ || ೨ || ಖಗವಾಹನನೆ ಬಗೆಬಗೆರೂಪನೆ ನಗೆಮೊಗದರುಶನೆ ನೀ ಬಾರೊ | ಜಗದೊಳು ನಿನ್ನಯ ಮಹಿಮೆಯ ಪೊಗಳುವ ಪುರಂದರವಿಠ್ಠಲ ನೀ ಬಾರೊ || ೩ ||

44

ಯಾರು ಒಲಿದರೇನು ನಮಗಿ-ನ್ನಾರು ಮುನಿದರೇನು ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ || ಪಲ್ಲವಿ|| ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ |೧ || ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ || ೨ || ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ || ೩ ||

45

ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ||ಪಲ್ಲವಿ|| ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯ ಬಂದವರು ||೧ || ವೇಣುವಿನೋದನ ಪ್ರಾಣಪ್ರಿಯನ ಜಾಣೆಯರರಸನ ಕರೆಯ ಬಂದವರು || ೨ || ಕರಿರಾಜವರದನ ಪರಮಪುರುಷನ ಪುರಂದರವಿಠಲನ ಕರೆಯ ಬಂದವರು || ೩ ||

46

ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ ಮನವೆಂಬೊ ಮಂಟಪ ತನುವೆಂಬೊ ಹಾಸು ಮಂಚ ಜ್ಞಾನವೆಂಬೊ ದಿವ್ಯದೀಪದ ಬೆಳಕಲಿ ಸನಕಾದಿ ವಂದ್ಯ ನೀ ಬೇಗ ಬಾರೊ ಪಂಚದೈವರು ಯಾವಾಗಲೂ ಎನ್ನ ಹೊಂಚು ಹಾಕಿ ನೋಡುತಾರೆ ಹೊಂಚುಗಾರರು ಆರು ಮಂದಿ ಆವ ಹಿಂದು ಮುಂದಿಲ್ಲದೆ ಎಳೆಯುತಾರೆ ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆನೊ ಇನ್ನಾದರೂ ಎನ್ನ ಕೈ ಪಿಡಿಯೊ ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ ಮನ್ನಿಸಿ ಎನ್ನನು ಕಾಯಬೇಕೊ

47

ಯಾರು ಬಿಟ್ಟರೂ ಕೈಯ ನೀ ಬಿಡದಿರು ಕಂಡ್ಯ ನಾರಾಯಣ ಸ್ವಾಮಿ ನೀ ಬಿಟ್ಟರೆ ಮುಂದಿನ್ನಾರು ಕಾಯ್ವರ ಕಾಣೆ ನಾರಾಯಣ ||ಪ|| ಮುಂದೆ ನೋಡಿದರೆ ಹೆಬ್ಬುಲಿ ಬಾಯ್ಬಿಡುತಿದೆ ನಾರಾಯಣ ಸ್ವಾಮಿ ಹಿಂದೆ ನೋಡಿದರೆ ಹೆಬ್ಬಾವು ನುಂಗುತಲಿದೆ ನಾರಾಯಣ ಕಂಡು ಮಡುವ ಬೀಳಲು ಅಲ್ಲಿ ನೆಗಳಿಗೆ ನಾರಾಯಣ ಬಹು ಬಂಧನದೊಳು ಸಿಕ್ಕಿ ಬಳಲಿ ನೊಂದೆನಯ್ಯ ನಾರಾಯಣ ||೧|| ನಂಬಿ ನಾ ಪಿಡಿದರೆ ಕೊಂಬೆಲ್ಲ ಮುರಿದಾವು ನಾರಾಯಣ ಸ್ವಾಮಿ ಹಂಬಲಿಸಿದರಂಜಬೇಡವೆಂಬುವರಿಲ್ಲ ನಾರಾಯಣ ತುಂಬಿದ ಹೊಳೆಯಲ್ಲಿ ಹರಿಗೋಲನೇರಿದೆ ನಾರಾಯಣ ಸ್ವಾಮಿ ಅಂಬಿಗನಂತೆನ್ನ ದಡವ ಸೇರಿಸೊ ಮುನ್ನ ನಾರಾಯಣ ||೨|| ಶಿಶು ಅವತಾರದಿ ಪಶುಗಳ ನೀ ಕಾಯ್ದೆ ನಾರಾಯಣ ಸ್ವಾಮಿ ದಶ ಅವತಾರದಿ ಚಕ್ರವ ತಾಳಿದೆ ನಾರಾಯಣ ವಿಷದ ಕಾಳಿಂಗನ ಮಡುವ ಕಲಕಿ ಬಂದೆ ನಾರಾಯಣ ಸ್ವಾಮಿ ವಸುಧೆಯೊಳಧಿಕ ಪುರಂದರವಿಠಲನೆ ನಾರಾಯಣ ||೩||

48

ಯಾರೂ ಸಂಗಡ ಬಾಹೋರಿಲ್ಲ ನಾರಾಯಣ ನಿಮ್ಮ ನಾಮ ಒಂದಲ್ಲದೆ ||ಪ|| ಹೊತ್ತು ನವಮಾಸ ಪರಿಯಂತರವು ಗರ್ಭದಲಿ ಹೆತ್ತು ಬಲು ನೋವು ಬೇನೆಗಳಿಂದಲಿ ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ ಅತ್ತು ಕಳುಹುವಳಲ್ಲದೆ ನೆರೆ ಬಾಹಳೆ || ೧|| ದೇವವಿಪ್ರರು ಅಗ್ನಿ ಸಾಕ್ಷಿಯಿಂದಲಿ ತನ್ನ ಭಾವಶುದ್ಧಿಯಲಿ ಧಾರೆಯೆರೆಸಿಕೊಂಡ ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯಿಂದೆನುತ ಗೋಳಿಡುವಳಲ್ಲದೆ ||೨|| ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ ಎತ್ತಿವನ ಹೊರಗೊಯ್ದು ಹಾಕೆಂಬರು ಎತ್ತಿದ ಕಸಕ್ಕಿಂತ ಕಡೆಯಾಯಿತೀ ದೇಹ ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ ||೩|| ಪುತ್ರ ಮಿತ್ರರು ಸಕಲ ಬಂಧು ಬಳಗಗಳೆಲ್ಲ ಹತ್ತಿರ ನಿಂತು ನೋಡುವರಲ್ಲದೆ ಮೃತ್ಯುದೇವಿಯು ಬಂದು ಅಸುಗಳನು ಸೆಳೆವಾಗ ಮತ್ತೆ ತನ್ನವರಿದ್ದು ಏನು ಮಾಡುವರು ||೪|| ಯಮನು ದೂತರು ಬಂದು ಪಾಶಂಗಳನೆ ಎಸೆದು ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||೫||

About Purandara Dasa Compositions

This is a collection of songs by Purandara Dasa, the 16th-century saint-composer of Karnataka, in Kannada. His songs, devaranamas and kirtanas, praise Lord Vitthala and Krishna, teach devotion in simple words, and gently mock hypocrisy and pride; each carries his signature, "Purandara Vitthala".

Written by: Purandara Dasa (1484 to 1564)

When to chant: In bhajans and concerts, in Carnatic music lessons, and on Purandara Dasa Aradhana (Pushya Amavasya).

Did you know?

  • Purandara Dasa (1484 to 1564) is honoured as the Karnataka Sangeeta Pitamaha, the grandfather of Carnatic music, for the graded lessons he set out.
  • Born a wealthy merchant named Srinivasa Nayaka, he gave away his wealth and became a disciple of Vyasatirtha.
  • Tradition credits him with an enormous number of songs, of which a few thousand survive.

Frequently asked questions

Who was Purandara Dasa?

A 16th-century saint-composer of Karnataka, called the grandfather of Carnatic music.

What is his signature?

"Purandara Vitthala", found in every one of his songs.

In which language did he compose?

Mostly in Kannada, with some songs in Sanskrit.

Offered for worship and study, not as prediction. Non-commercial.