MuhurtaNow

Sarvajna Tripadi

Sarvajna · Traditional devotional text

25

ಸರ್ವಜ್ಞನೆಂಬುವನು ಗರ್ವದಿಂದಾದವನೆ? ಸರ್ವರೊಳೊಂದೊಂದು ನುಡಿಗಲಿತು ವಿದ್ಯದ ಪರ್ವತವೆ ಆದ ಸರ್ವಜ್ಞ

ಸರ್ವಜ್ಞನೆಂಬುವನು ಅಹಂಕಾರದಿಂದ ಆದವನಲ್ಲ. ಎಲ್ಲರಿಂದಲೂ ಒಂದೊಂದು ಮಾತು ಕಲಿತು ವಿದ್ಯೆಯ ಪರ್ವತವೇ ಆದ.

29

ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ ವೆಲ್ಲವರಗಿಲ್ಲ ಸರ್ವಜ್ಞ

ಎಲ್ಲವನ್ನೂ ಬಲ್ಲವರು ಯಾರೂ ಇಲ್ಲ, ಬಲ್ಲವರೂ ಹೆಚ್ಚು ಜನರಿಲ್ಲ. ಬಲ್ಲಿದರಿದ್ದರೂ ಅವರಿಗೆ ಎಲ್ಲ ಶಕ್ತಿಯಿಲ್ಲ; ಎಲ್ಲ ವಿದ್ಯೆಯೂ ಎಲ್ಲರಿಗೂ ಇಲ್ಲ.

52

ಹಿರಿಯ ನಾನೆನಬೇಡ ಗುರುವ ನಿಂದಿಸಬೇಡ ಬರೆವರ ಕೂಡ ಹಗೆಬೇಡ, ಬಂಗಾರ ದೆರವು ಬೇಡೆಂದ ಸರ್ವಜ್ಞ

ನಾನೇ ದೊಡ್ಡವನು ಎನ್ನಬೇಡ, ಗುರುವನ್ನು ನಿಂದಿಸಬೇಡ, ಲೆಕ್ಕ ಬರೆಯುವವರೊಡನೆ ಹಗೆ ಬೇಡ, ಚಿನ್ನವನ್ನು ಸಾಲ ಪಡೆಯಬೇಡ.

75

ದಾನ ಭಕ್ತಿಗಳಲ್ಲಿ ʻನಾನುʼ ಮರೆದಿರಬೇಕು ನಾನೆಂಬ ರೋಗ ನೀಗಿದಗೆ ಗುರುಬೋಧೆ ತಾನೆ ಫಲಿಸುವುದು ಸರ್ವಜ್ಞ

ದಾನ ಮತ್ತು ಭಕ್ತಿಯಲ್ಲಿ 'ನಾನು' ಎಂಬುದನ್ನು ಮರೆಯಬೇಕು. ಅಹಂಕಾರವೆಂಬ ರೋಗ ಹೋದವನಿಗೆ ಗುರುವಿನ ಬೋಧನೆ ತಾನಾಗಿಯೇ ಫಲಿಸುತ್ತದೆ.

92

ಬಂದ ಸುಖದುಃಖವನು ಕುಂದದುಬ್ಬದೆ ನುಂಗಿ ಇಂದುಧರನಾಜ್ಞೆಯೆಂದಿಹಗೆ ಗುರುಕೃಪೆಯು ಎಂದಿಗೂ ಬಿಡದು ಸರ್ವಜ್ಞ

ಬಂದ ಸುಖ-ದುಃಖಗಳನ್ನು ಕುಗ್ಗದೆ, ಹಿಗ್ಗದೆ ಸ್ವೀಕರಿಸಿ, ಇದು ದೇವರ ಇಚ್ಛೆ ಎಂದು ಬಾಳುವವನನ್ನು ಗುರುಕೃಪೆ ಎಂದಿಗೂ ಬಿಡದು.

135

ಅಂಜದಲೆ ಕೊಂಡಿಹರೆ ನಂಜು ಅಮೃತವಕ್ಕು ಅಂಜಿ ಅಳುಕುತಲಿ ಕೊಂಡಿಹರೆ ಅಮೃತವು ನಂಜಿನಂತಕ್ಕು! ಸರ್ವಜ್ಞ

ಅಂಜದೆ ಸ್ವೀಕರಿಸಿದರೆ ವಿಷವೂ ಅಮೃತವಾಗುತ್ತದೆ; ಅಂಜಿ ಅಳುಕುತ್ತ ಸ್ವೀಕರಿಸಿದರೆ ಅಮೃತವೂ ವಿಷದಂತಾಗುತ್ತದೆ.

227

ಸತ್ಯಕ್ಕೆ ಸರಿಯಿಲ್ಲ ಚಿತ್ತಕ್ಕೆ ಸ್ಥಿರವಿಲ್ಲ ಹಸ್ತದಿಂದಧಿಕ ಹಿತರಿಲ್ಲ; ಪರದೈವ ನಿತ್ಯನಿಂದಿಲ್ಲ ಸರ್ವಜ್ಞ

ಸತ್ಯಕ್ಕೆ ಸಮನಾದುದಿಲ್ಲ, ಮನಸ್ಸಿಗೆ ಸ್ಥಿರತೆಯಿಲ್ಲ, ನಮ್ಮ ಕೈಗಿಂತ ಹೆಚ್ಚಿನ ಹಿತೈಷಿಯಿಲ್ಲ, ನಿತ್ಯನಾದ ದೇವರಿಗಿಂತ ಮಿಗಿಲಾದ ದೈವವಿಲ್ಲ.

232

ಮಾತೆಯಿಂ ಹಿತರಿಲ್ಲ ಕೋತಿಯಿಂ ಮರುಳಿಲ ಜ್ಯೋತಿಯಿಂದಧಿಕ ಬೆಳಕಿಲ್ಲ; ದೈವವ - ಜಾತನಿಂದಿಲ್ಲ ಸರ್ವಜ್ಞ

ತಾಯಿಗಿಂತ ಹಿತೈಷಿಯಿಲ್ಲ, ಕೋತಿಗಿಂತ ಚಂಚಲವಿಲ್ಲ, ದೀಪಕ್ಕಿಂತ ಹೆಚ್ಚಿನ ಬೆಳಕಿಲ್ಲ, ಹುಟ್ಟಿಲ್ಲದ ದೇವರಿಗಿಂತ ಮಿಗಿಲಾದ ದೈವವಿಲ್ಲ.

233

ಇದ್ದಲಿಂ ಕರಿದಿಲ್ಲ! ಬುದ್ಧಿಯಿಂ ಹಿರಿದಿಲ್ಲ ವಿದ್ಯದಿಂದಧಿಕ ಧನವಿಲ್ಲ; ದೈವ ತಾ ರುದ್ರನಿಂದಿಲ್ಲ ಸರ್ವಜ್ಞ

ಇದ್ದಿಲಿಗಿಂತ ಕಪ್ಪಿಲ್ಲ, ಬುದ್ಧಿಗಿಂತ ದೊಡ್ಡದಿಲ್ಲ, ವಿದ್ಯೆಗಿಂತ ಹೆಚ್ಚಿನ ಸಂಪತ್ತಿಲ್ಲ, ರುದ್ರನಿಗಿಂತ ಮಿಗಿಲಾದ ದೈವವಿಲ್ಲ.

253

ಆವಕಾಲವು ವನದಿ ಜೀವ ಕಾಲದ ಕಳೆದು ಜೀವಚಯದಲ್ಲಿ ದಯವಿಲ್ಲದಿರುವವನ ಕಾವನೇ ಶಿವನು? ಸರ್ವಜ್ಞ

ಜೀವನವನ್ನೆಲ್ಲ ಕಾಡಿನಲ್ಲಿ ತಪಸ್ಸಿನಲ್ಲಿ ಕಳೆದರೂ, ಜೀವಿಗಳ ಮೇಲೆ ದಯೆಯಿಲ್ಲದವನನ್ನು ದೇವರು ಕಾಪಾಡುವನೇ?

257

ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು ಎತ್ತು ಗಾಣವನು ಹೊತ್ತು ತಾ ನಿತ್ಯದಿ ಸುತ್ತಿ ಬಂದಂತೆ ಸರ್ವಜ್ಞ

ಮನಸ್ಸಿಲ್ಲದೆ ಗುಡಿಯನ್ನು ಸುತ್ತಿದರೆ ಏನು ಫಲ? ಅದು ಎತ್ತು ಗಾಣವನ್ನು ಹೊತ್ತು ದಿನವೂ ಸುತ್ತಿ ಬಂದಂತೆ.

259

ಮನೆಯೇನು ವನವೇನು ನೆನಹು ಇದ್ದರೆ ಸಾಕು ಮನ ಮುಟ್ಟಿ ಶಿವನ ನೆನೆಯದನು ಬೆಟ್ಟದ ಕೊನೆಯಲ್ಲಿದ್ದೇನು? ಸರ್ವಜ್ಞ

ಮನೆಯಲ್ಲಿದ್ದರೇನು, ಕಾಡಿನಲ್ಲಿದ್ದರೇನು, ಮನಸ್ಸಿನಲ್ಲಿ ದೇವರ ನೆನಪಿದ್ದರೆ ಸಾಕು. ಮನಸಾರೆ ನೆನೆಯದವನು ಬೆಟ್ಟದ ತುದಿಯಲ್ಲಿದ್ದರೂ ಏನು ಪ್ರಯೋಜನ?

263

ಅರಿಯದೀಯದ ದಾನ ತೆರೆದು ನೋಡದ ಕಣ್ಣು ತಿರುಗಿ ಬಯಸದನ ಶಿವಪೂಜೆ ಶಿವನಿಂದ ಹಿರಿದೆಂದು ಅರಿಗು ಸರ್ವಜ್ಞ

ಯಾರಿಗೂ ತಿಳಿಯದಂತೆ ಮಾಡುವ ದಾನ, ತೋರಿಕೆಗೆ ಬಿಚ್ಚದ ಕಣ್ಣು, ಪ್ರತಿಫಲ ಬಯಸದ ಪೂಜೆ ದೇವರಿಗಿಂತಲೂ ದೊಡ್ಡದು ಎಂದು ತಿಳಿ.

268

ಕಾಯಕದ ಭಕ್ತನ ಆಯತವ ನೋಡಿರೋ ಕಾಯಕವ ಬಿಟ್ಟ ಮರುದಿನ ಕಪ್ಪರದ ಕಾಯಕವೆ ಬಕ್ಕು ಸರ್ವಜ್ಞ

ದುಡಿಮೆ ಮಾಡುವ ಭಕ್ತನ ನೆಮ್ಮದಿಯನ್ನು ನೋಡಿ. ದುಡಿಮೆ ಬಿಟ್ಟ ಮರುದಿನವೇ ಭಿಕ್ಷಾಪಾತ್ರೆ ಹಿಡಿಯುವ ಸ್ಥಿತಿ ಬರುತ್ತದೆ.

296

ಕೋಳಿ ಕೂಗದ ಮುನ್ನ ಏಳುವದು ನಿತ್ಯದಲಿ ಭಾಳಲೋಚನನ ಭಕ್ತಿಯಿಂ ನೆನೆದರೆ ಆಳಿನಾಳಯ್ಯ ಸರ್ವಜ್ಞ

ಕೋಳಿ ಕೂಗುವ ಮುನ್ನವೇ ನಿತ್ಯವೂ ಎದ್ದು, ಭಕ್ತಿಯಿಂದ ದೇವರನ್ನು ನೆನೆಯುವವನು ಎಲ್ಲರಿಗಿಂತ ಮೇಲಾಗುತ್ತಾನೆ.

300

ಒಡಲ ಹಿಡಿದಾಡದಿರು ನುಡಿಯ ಹೋಗಾಡದಿರು ನಡೆಯೊಳೆಚ್ಚರವ ಬಿಡದಿರು ಪರವಶದಿ ದೃಢವನಗಲದಿರು ಸರ್ವಜ್ಞ

ದೇಹವನ್ನು ಬೇಕಾಬಿಟ್ಟಿ ಆಡಿಸಬೇಡ, ಮಾತನ್ನು ವ್ಯರ್ಥಮಾಡಬೇಡ, ನಡೆಯಲ್ಲಿ ಎಚ್ಚರ ತಪ್ಪಬೇಡ, ಪರವಶನಾದಾಗಲೂ ದೃಢತೆಯನ್ನು ಬಿಡಬೇಡ.

317

ಜ್ಞಾನದಿಂ ಮೇಲಿಲ್ಲ ಶ್ವಾನನಿಂ ಕೀಳಿಲ್ಲ ಭಾನುವಿಂದಧಿಕ ಬೆಳಗಿಲ್ಲ ಜಗದೊಳಗೆ ಜ್ಞಾನವೇ ಮಿಗಿಲು ಸರ್ವಜ್ಞ

ಜ್ಞಾನಕ್ಕಿಂತ ಮೇಲಾದುದಿಲ್ಲ, ಕೃತಘ್ನ ನಾಯಿಗಿಂತ ಕೀಳಿಲ್ಲ, ಸೂರ್ಯನಿಗಿಂತ ಹೆಚ್ಚಿನ ಬೆಳಕಿಲ್ಲ; ಜಗತ್ತಿನಲ್ಲಿ ಜ್ಞಾನವೇ ಶ್ರೇಷ್ಠ.

320

ಎತ್ತಹೋದರೂ ಮನವ ಹತ್ತಿಕೊಂಡೇ ಬಹದು ಮತ್ತೊಬ್ಬ ಮುನಿದು ಕೊಳಲರಿಯ ಜಾನದ ಬಿತ್ತು ಲೇಸೆಂದ ಸರ್ವಜ್ಞ

ಎಲ್ಲಿಗೆ ಹೋದರೂ ಅದು ಮನಸ್ಸಿನೊಡನೆ ಬರುತ್ತದೆ; ಯಾರು ಮುನಿದರೂ ಕಿತ್ತುಕೊಳ್ಳಲಾಗದು. ಜ್ಞಾನದ ಬೀಜವೇ ಶ್ರೇಷ್ಠ ಸಂಪತ್ತು.

332

ಅಲ್ಲಿಪನಿಲ್ಲಿಪ ನೆಲ್ಲಿಪನೆನಬೇಡ ಕಲ್ಲಿನಂತಿಪ್ಪ ಮಾನವನ ಮನ ಕರಗೆ ಅಲ್ಲಿಪ್ಪ ನೋಡ ಸರ್ವಜ್ಞ

ದೇವರು ಅಲ್ಲಿದ್ದಾನೆ, ಇಲ್ಲಿದ್ದಾನೆ, ಎಲ್ಲಿದ್ದಾನೆ ಎಂದು ಹುಡುಕಬೇಡ. ಕಲ್ಲಿನಂತಿರುವ ಮನುಷ್ಯನ ಮನಸ್ಸು ಕರಗಿದಲ್ಲಿ ಅವನಿರುತ್ತಾನೆ.

373

ಆನೆ ನೀರಾಟದಲಿ ಮೀನ ಕಂಡಂಜುವದೆ? ಹೀನ ಮಾನವರ ಬಿರುನುಡಿಗೆ ತತ್ವದ ಜ್ಞಾನಿಯಂಜುವನೆ? ಸರ್ವಜ್ಞ

ನೀರಿನಲ್ಲಿ ಆಟವಾಡುವ ಆನೆ ಮೀನನ್ನು ಕಂಡು ಹೆದರುವುದೇ? ಹಾಗೆಯೇ ಹೀನರ ಕಟುಮಾತಿಗೆ ತತ್ತ್ವ ಬಲ್ಲ ಜ್ಞಾನಿ ಹೆದರುವುದಿಲ್ಲ.

383

ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಾಣೊ! ಬಲ್ಲರೆ ಬಲ್ಲೆನೆನಬೇಡ, ಸುಮ್ಮನಿರ ಬಲ್ಲವನೆ ಬಲ್ಲ! ಸರ್ವಜ್ಞ

ನಾನು ಬಲ್ಲೆ ಎಂಬ ಮಾತೆಲ್ಲವೂ ಹುಸಿ. ಬಲ್ಲವನಾದರೆ ಬಲ್ಲೆ ಎನ್ನಬೇಡ; ಸುಮ್ಮನಿರಲು ಬಲ್ಲವನೇ ನಿಜವಾಗಿ ಬಲ್ಲವನು.

388

ತನ್ನ ನೋಡಲಿ ಎಂದು! ಕನ್ನಡಿಯು ಕರೆಯುವುದೆ? ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು ಕನ್ನಡಿಯು ಜಗಕೆ! ಸರ್ವಜ್ಞ

ತನ್ನನ್ನು ನೋಡಲಿ ಎಂದು ಕನ್ನಡಿ ಯಾರನ್ನಾದರೂ ಕರೆಯುತ್ತದೆಯೇ? ಒಳಗೆ ಜ್ಞಾನ ಉದಯಿಸಿದ ಮಹಾತ್ಮನು ಜಗತ್ತಿಗೆ ಕನ್ನಡಿಯಾಗುತ್ತಾನೆ.

404

ಚಂದನವ ಕರಗಿಸಲು ಬೆಂದು ಪರಿಮಳವಕ್ಕು ಸಂದರಿವನರಿದು ಸತ್ಪುರುಷರೆನಿಸಿಹರು ನೊಂದು ಸೈರಿಪರು ಸರ್ವಜ್ಞ

ಗಂಧವನ್ನು ತೇದಷ್ಟೂ ಪರಿಮಳ ಹೆಚ್ಚುತ್ತದೆ. ಸತ್ಪುರುಷರೂ ಹಾಗೆಯೇ; ನೊಂದರೂ ಸಹಿಸಿಕೊಂಡು ಒಳ್ಳೆಯತನವನ್ನೇ ಹರಡುತ್ತಾರೆ.

405

ಇಂದು ನಾಳೆಗೆ ಎಂದು ತಂದು ಕೂಡಿಡಬೇಡ ಬಂದುದನೆ ಉಂಡು ಸುಖಿಸುತ ಬೇನೆಯದು ಬಂದಾಗ ನರಳು ಸರ್ವಜ್ಞ

ಇಂದಿಗೆ, ನಾಳೆಗೆ ಎಂದು ಅತಿಯಾಗಿ ಕೂಡಿಡಬೇಡ. ಬಂದದ್ದನ್ನು ಸಂತೋಷದಿಂದ ಅನುಭವಿಸು; ಕಷ್ಟ ಬಂದಾಗ ನೋಡಿಕೊಳ್ಳೋಣ.

415

ತನ್ನ ಮುಖ ಬೆನ್ನುಗಳು ತನ್ನ ಕಣ್ಣಿಗೆ ಮರೆಯು ತನ್ನ ಗುಣದೋಷಗಳನರಿಯೆ ಇದನರಿದ ಇನ್ನೊಬ್ಬ ಬೇಕು ಸರ್ವಜ್ಞ

ತನ್ನ ಮುಖ ಮತ್ತು ಬೆನ್ನು ತನ್ನ ಕಣ್ಣಿಗೆ ಕಾಣುವುದಿಲ್ಲ. ಹಾಗೆಯೇ ತನ್ನ ಗುಣ-ದೋಷಗಳನ್ನು ತಿಳಿಯಲು ಅವನ್ನು ನೋಡಬಲ್ಲ ಇನ್ನೊಬ್ಬರು ಬೇಕು.

428

ಒಂದೊಂದು ಹನಿ ಬಿದ್ದು ನಿಂದಲ್ಲಿ ಮಡುವಕ್ಕು ಸಂದ ಸತ್ಪುರುಷರೊಡನಾಡೆ ಪರಬೊಮ್ಮ ಮುಂದೆ ಬಂದಕ್ಕು ಸರ್ವಜ್ಞ

ಒಂದೊಂದು ಹನಿ ಬಿದ್ದು ನಿಂತಲ್ಲೇ ಮಡುವಾಗುತ್ತದೆ. ಹಾಗೆಯೇ ಸತ್ಪುರುಷರ ಸಹವಾಸದಿಂದ ಮೆಲ್ಲಮೆಲ್ಲನೆ ಪರಮ ಅರಿವು ತಾನಾಗಿ ಬರುತ್ತದೆ.

440

ಕೋಟಿ ಗೀತವನೋದಿ ಪಾಠಯಿಸಿ ಫಲವೇನು ಕೂಟಸ್ಥನಲ್ಲದವನೋದು ಗಿಳಿ ಕಲಿತ ಪಾಠದಂತಕ್ಕು ಸರ್ವಜ್ಞ

ಕೋಟಿ ಗೀತೆಗಳನ್ನು ಓದಿ, ಪಾಠ ಮಾಡಿ ಏನು ಫಲ? ಅದರ ಸಾರವನ್ನು ಅರಿಯದವನ ಓದು ಗಿಳಿ ಕಲಿತ ಪಾಠದಂತೆ.

479

ಕೋಪವೆಂಬುದು ತಾನು ಪಾಪದ ನೆಲಗಟ್ಟು ಆಪತ್ತು ಸುಖವು ಸರಿಯೆಂದು ಪೋಪಗೆ ಪಾಪವೆಲ್ಲಿಹುದು ಸರ್ವಜ್ಞ

ಕೋಪವೇ ಪಾಪದ ಅಡಿಪಾಯ. ಕಷ್ಟ-ಸುಖಗಳನ್ನು ಸಮಾನವಾಗಿ ಕಾಣುವವನ ಬಳಿ ಪಾಪ ಎಲ್ಲಿರುತ್ತದೆ?

494

ಓದಿ ಬೂದಿಯ ಪೂಸಿ ತೇದು ಕಾವಿಯ ಹೊದೆದು ಹೋದಾತ ಯೋಗಿಯೆನಬೇಡ, ಇಂದ್ರಿಯವ ಕಾದಾತ ಯೋಗಿ ಸರ್ವಜ್ಞ

ಓದಿ, ವಿಭೂತಿ ಬಳಿದು, ಕಾವಿ ಹೊದ್ದು ಹೊರಟವನನ್ನು ಯೋಗಿ ಎನ್ನಬೇಡ. ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟವನೇ ಯೋಗಿ.

514

ಒಡಲೆಂಬ ಹುತ್ತಕ್ಕೆ ನುಡಿವ ನಾಲಿಗೆ ಸರ್ಪ ಕಡುರೋಷವೆಂಬ ವಿಷವೇರಿ ಸಮತೆ ಗಾ ರುಡಿಗನಂತಕ್ಕು ಸರ್ವಜ್ಞ

ದೇಹವೆಂಬ ಹುತ್ತದಲ್ಲಿ ನಾಲಿಗೆ ಎಂಬ ಹಾವಿದೆ. ಅದಕ್ಕೆ ಕೋಪದ ವಿಷ ಏರಿದಾಗ ಸಮಾಧಾನವೇ ಅದನ್ನು ಇಳಿಸುವ ಮಂತ್ರವಾದಿ.

531

ಅಡವಿಯನು ಹೊಗಬಹುದು ಮಡದಿಯನು ಬಿಡಬಹುದು ಬಿಡದೆ ಧ್ಯಾನದೊಳಿರಬಹುದು, ವಾಸನೆಯ ಕೊಡಹಲಳವಲ್ಲ ಸರ್ವಜ್ಞ

ಕಾಡಿಗೆ ಹೋಗಬಹುದು, ಸಂಸಾರ ಬಿಡಬಹುದು, ನಿರಂತರ ಧ್ಯಾನದಲ್ಲಿರಬಹುದು; ಆದರೆ ಮನಸ್ಸಿನ ಹಳೆಯ ಚಾಳಿಗಳನ್ನು ಕೊಡವಿ ಹಾಕುವುದು ಸುಲಭವಲ್ಲ.

572

ವೇಷಗಳ ಧರಿಸೇನು? ದೇಶಗಳ ತಿರುಗೇನು? ದೋಷಗಳ ಹೇಳಿ ಫಲವೇನು? ಮನಸಿನ ಆಶೆ ಬಿಡದನಕ ಸರ್ವಜ್ಞ

ಮನಸ್ಸಿನ ಆಸೆ ಬಿಡದಿದ್ದರೆ ವೇಷಗಳನ್ನು ಧರಿಸಿ, ದೇಶಗಳನ್ನು ಸುತ್ತಿ, ಇತರರ ದೋಷಗಳನ್ನು ಹೇಳಿ ಏನು ಫಲ?

594

ಎಲ್ಲ ಆಶೆಯ ಬಿಟ್ಟ ರಿಲ್ಲಿಯೇ ಕೈಲಾಸ ಎಲ್ಲವನು ಬಯಸಿ ಭ್ರಮಿಸಿದಡೆ ನರಕ ತಾ ನಿಲ್ಲಿಯೇ ನೋಡ! ಸರ್ವಜ್ಞ

ಎಲ್ಲ ಆಸೆಗಳನ್ನು ಬಿಟ್ಟರೆ ಇಲ್ಲೇ ಕೈಲಾಸ; ಎಲ್ಲವನ್ನೂ ಬಯಸಿ ಭ್ರಮಿಸಿದರೆ ಇಲ್ಲೇ ನರಕ.

598

ಈವಂಗೆ ದೇವಂಗೆ ಆವುದಂತರವಯ್ಯ? ದೇವನು ಜಗಕೆ ಕೊಡುತಿಹನು, ಕೈಯ್ಯಾರೆ ಈವನೇ ದೇವ! ಸರ್ವಜ್ಞ

ಕೊಡುವವನಿಗೂ ದೇವರಿಗೂ ಏನು ವ್ಯತ್ಯಾಸ? ದೇವರು ಜಗತ್ತಿಗೆ ಕೊಡುತ್ತಾನೆ; ಕೈಯಾರೆ ಕೊಡುವವನೇ ದೇವರು.

603

ಅನ್ನವನು ಇಕ್ಕುವದು ನನ್ನಿಯನು ನುಡಿಯುವದು ತನ್ನಂತೆ ಪರರ ಬಗೆದಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ

ಹಸಿದವರಿಗೆ ಅನ್ನ ನೀಡುವುದು, ಸತ್ಯವನ್ನೇ ನುಡಿಯುವುದು, ಇತರರನ್ನು ತನ್ನಂತೆಯೇ ಕಾಣುವುದು; ಇದೇ ಕೈಲಾಸ ತಲುಪುವ ಜಾಣ್ಮೆ.

609

ಹುಟ್ಟುವಾಗಲೆ ಧನವ ಮೊಟ್ಟೆಗಟ್ಟಿಳಿದಿಹನೆ? ಕಟ್ಟಕಡೆಯಲ್ಲಿ ಕೊಂಡೊಯ್ಯನಿದನರಿದು ಕೊಟ್ಟುಂಬ ದಾನಿ ಸರ್ವಜ್ಞ

ಹುಟ್ಟುವಾಗ ಯಾರಾದರೂ ಹಣದ ಗಂಟು ಹೊತ್ತು ಬಂದಿದ್ದಾರೆಯೇ? ಕೊನೆಯಲ್ಲಿ ಕೊಂಡೊಯ್ಯಲೂ ಆಗದು. ಇದನ್ನರಿತು ಕೊಟ್ಟು ಉಣ್ಣುವವನೇ ದಾನಿ.

617

ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ ಕೊಟ್ಟದ್ದು ಕೆಟ್ಟಿತೆನಬೇಡ ಮುಂದಕ್ಕೆ ಕಟ್ಟಿಹುದು ಬುತ್ತಿ ಸರ್ವಜ್ಞ

ಕೊಟ್ಟದ್ದು ನಿನ್ನದು, ಬಚ್ಚಿಟ್ಟದ್ದು ಬೇರೆಯವರದ್ದು. ಕೊಟ್ಟದ್ದು ನಷ್ಟವಾಯಿತು ಎನ್ನಬೇಡ; ಅದು ಮುಂದಿನ ಪಯಣಕ್ಕೆ ಕಟ್ಟಿದ ಬುತ್ತಿ.

622

ಆಗ ಬಾ! ಈಗ ಬಾ! ಹೋಗಿ ಬಾ! ಎನ್ನದಲೆ ಆಗಲೇ ಕರೆದು ಕೊಡುವವನ ಧರ್ಮ ಹೊ- ನಾಗದೆ ಬಿಡದು! ಸರ್ವಜ್ಞ

ಆಮೇಲೆ ಬಾ, ಈಗ ಬಾ, ಹೋಗಿ ಬಾ ಎಂದು ಸತಾಯಿಸದೆ, ಆಗಲೇ ಕರೆದು ಕೊಡುವವನ ದಾನ ಚಿನ್ನವಾಗದೆ ಬಿಡದು.

636

ಬೇಡುವ ಮುನ್ನೀವ ನಾಡಿನೊಳಗುತ್ತಮನು ಬೇಡಿದಡೆ ಈವ ಮಧ್ಯಮನಧಮ ತಾ ಬೇಡಲೀಯದನು ಸರ್ವಜ್ಞ

ಕೇಳುವ ಮೊದಲೇ ಕೊಡುವವನು ಉತ್ತಮ, ಕೇಳಿದ ಮೇಲೆ ಕೊಡುವವನು ಮಧ್ಯಮ, ಕೇಳಿದರೂ ಕೊಡದವನು ಅಧಮ.

638

ಸುಡದುಪ್ಪವೆರೆದಿಹರೆ ಕೊಡನೆತ್ತಿ ಹೊಯ್ಯುವರೆ? ಬಡವ ನಾನೆಂದು ಎನಬೇಡ, ಇರವರಿದು ಕೊಡುವುದೇ ಲೇಸು ಸರ್ವಜ್ಞ

ತುಪ್ಪ ಸುರಿಯುವಾಗ ಕೊಡವನ್ನೇ ಎತ್ತಿ ಹೊಯ್ಯುತ್ತಾರೆಯೇ? ಹಾಗೆಯೇ, ಬಡವ ಎಂದು ಹಿಂಜರಿಯಬೇಡ; ನಿನ್ನ ಶಕ್ತಿಯರಿತು ಸ್ವಲ್ಪವಾದರೂ ಕೊಡುವುದೇ ಲೇಸು.

654

ಅನ್ನವನು ಇಕ್ಕುವ ಅನ್ಯ ಜಾತನೆ ಕುಲಜ ಅನ್ನವನು ಇಕ್ಕದುಣುತಿಪ್ಪ ಕುಲಜಾತ ಅನ್ಯನೆಂದರಿಗು ಸರ್ವಜ್ಞ

ಹಸಿದವರಿಗೆ ಅನ್ನ ಕೊಡುವವನು ಯಾವ ಜಾತಿಯವನಾದರೂ ಅವನೇ ಕುಲೀನ; ಯಾರಿಗೂ ಕೊಡದೆ ತಾನೊಬ್ಬನೇ ಉಣ್ಣುವ ಕುಲೀನನೂ ಹೊರಗಿನವನೇ ಎಂದು ತಿಳಿ.

666

ಕಾಗೆಯಗುಳನು ಕಂಡು ಕೂಗುವದು ಬಳಗವನು ಕಾಗೆ ಕೋಳಿಗಳ ತೆರೆದುಣ್ಣದವನಿರವು ಕಾಗೆಗು ಕಪ್ಟ ಸರ್ವಜ್ಞ

ಕಾಗೆ ಒಂದು ಅಗುಳು ಕಂಡರೂ ತನ್ನ ಬಳಗವನ್ನು ಕೂಗಿ ಕರೆಯುತ್ತದೆ. ಕಾಗೆ, ಕೋಳಿಗಳಂತೆಯೂ ಹಂಚಿ ಉಣ್ಣದವನ ಬದುಕು ಕಾಗೆಗಿಂತಲೂ ಕೀಳು.

685

ಕೊಟ್ಟುಂಬ ಕಾಲದಲಿ ಕೊಟ್ಟುಣಲಿಕರಿಯದೆ ಹುಟ್ಟಿಯ ಒಳಗೆ ಜೇನಿಕ್ಕಿ ಪರರಿಂಗೆ ಬಿಟ್ಟು ಹೋದಂತೆ ಸರ್ವಜ್ಞ

ಕೊಟ್ಟು ಉಣ್ಣಬೇಕಾದ ಕಾಲದಲ್ಲಿ ಹಾಗೆ ಮಾಡದವನು, ಜೇನುಹುಳು ಗೂಡಿನಲ್ಲಿ ಜೇನು ಕೂಡಿಟ್ಟು ಬೇರೆಯವರಿಗೆ ಬಿಟ್ಟು ಹೋದಂತೆ.

695

ಇದ್ದಾಗ ಉಣ್ಣದವ ನೆದ್ದಾಗ ಉಣ್ಣುವನೆ? ಬಿದ್ದ ದೇಹವನು ಗುದ್ದಿನೊಳಗಿಡುವಾಗ ಬುದ್ಧಿ ಬಂದಪುದೆ? ಸರ್ವಜ್ಞ

ಇದ್ದಾಗ ಉಂಡು ಅನುಭವಿಸದವನು ಹೋದ ಮೇಲೆ ಉಣ್ಣುವನೇ? ದೇಹವನ್ನು ಗುಂಡಿಯಲ್ಲಿಡುವಾಗ ಬುದ್ಧಿ ಬಂದರೆ ಏನು ಪ್ರಯೋಜನ?

697

ಅನ್ನದಾನಗಳಿಂದ ಮುನ್ನ ದಾನಗಳಿಲ್ಲ ಅನ್ನಕ್ಕೆ ಮಿಗಿಲು ಇನ್ನಿಲ್ಲ, ಜಗದೊಳಗೆ ಅನ್ನವೇ ಪ್ರಾಣ! ಸರ್ವಜ್ಞ

ಅನ್ನದಾನಕ್ಕಿಂತ ಮಿಗಿಲಾದ ದಾನವಿಲ್ಲ. ಅನ್ನಕ್ಕಿಂತ ಹೆಚ್ಚಿನದು ಜಗತ್ತಿನಲ್ಲಿ ಬೇರಿಲ್ಲ; ಅನ್ನವೇ ಪ್ರಾಣ.

725

ನೆತ್ತವಿತ್ತಕ್ಕೆ ಬಲವು ಒತ್ತೆ ಸೂಳೆಗೆ ಬಲವು ಕತ್ತಲೆಯು ಬಲವು ಕಳ್ಳಂಗೆ, ಅರಸಿಂಗೆ ಸತ್ಯವೇ ಬಲವು ಸರ್ವಜ್ಞ

ಜೂಜುಗಾರನಿಗೆ ಪಣವೇ ಬಲ, ಕಳ್ಳನಿಗೆ ಕತ್ತಲೆಯೇ ಬಲ; ಆದರೆ ಅರಸನಿಗೆ ಸತ್ಯವೇ ಬಲ.

800

ಸತ್ಯರ ನುಡಿ ತೀರ್ಥ ನಿತ್ಯರ ನಡೆ ತೀರ್ಥ ಉತ್ತಮರ ಸಂಗವದು ತೀರ್ಥ ಹರಿವ ನೀ ರೆತ್ತಣದು ತೀರ್ಥ ಸರ್ವಜ್ಞ

ಸತ್ಯವಂತರ ಮಾತೇ ತೀರ್ಥ, ಸಜ್ಜನರ ನಡತೆಯೇ ತೀರ್ಥ, ಉತ್ತಮರ ಸಹವಾಸವೇ ತೀರ್ಥ; ಹರಿಯುವ ನೀರು ಮಾತ್ರ ತೀರ್ಥ ಹೇಗಾದೀತು?

802

ಡೊಂಕು ಹಣ್ಣುಗಳಲ್ಲಿ ಡೊಂಕು ಬಾಳೆಯಹಣ್ಣು ಡೊಂಕುಂಟು, ಒಳಗೆ ರುಚಿಯುಂಟು, ಸಜ್ಜನರ ಡೊಂಕು ಲೇಸೆಂದ ಸರ್ವಜ್ಞ

ಬಾಳೆಹಣ್ಣು ಡೊಂಕಾಗಿದ್ದರೂ ಒಳಗೆ ರುಚಿಯಿದೆ. ಸಜ್ಜನರ ಡೊಂಕೂ ಹಾಗೆಯೇ; ಹೊರಗೆ ಒರಟಾದರೂ ಒಳಗೆ ಒಳ್ಳೆಯತನವಿದೆ.

810

ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ ಅಲ್ಲದಹುದೆಂಬ ಅಜ್ಞಾನಿಯೊಡನಾಟ ಕಲ್ಲು ಹಾದಂತೆ ಸರ್ವಜ್ಞ

ಬಲ್ಲವರ ಸಹವಾಸ ಬೆಲ್ಲ ಸವಿದಂತೆ; ಸರಿಯನ್ನು ತಪ್ಪೆನ್ನುವ ಅಜ್ಞಾನಿಯ ಸಹವಾಸ ಕಲ್ಲು ಅಗಿದಂತೆ.

812

ಕಲ್ಲುಪ್ಪು ಕರ್ಪುರವು ಸೊಲ್ಲೆರಡು ಧಾತೊಂದು ಮಿಲ್ಲನೊಳ್ಳಿದನ ರೂಪೊಂದು ಗುಣದೊಳಗೆ ಎಲ್ಲ ಅಂತರವು ಸರ್ವಜ್ಞ

ಕಲ್ಲುಪ್ಪು ಮತ್ತು ಕರ್ಪೂರ ನೋಡಲು ಒಂದೇ ತರಹ, ಗುಣದಲ್ಲಿ ಅಜಗಜಾಂತರ. ಒಳ್ಳೆಯವನೂ ಕೆಟ್ಟವನೂ ರೂಪದಲ್ಲಿ ಒಂದೇ; ವ್ಯತ್ಯಾಸವೆಲ್ಲ ಗುಣದಲ್ಲಿದೆ.

815

ಉರಗನ ಹಲು ನಂಜು ಸುರಿಗೆಯ ಮೊನೆ ನಂಜು ಕರುಣವಿಲ್ಲದನ ನುಡಿ ನಂಜು, ದುರ್ಜನರ ಇರವೆಲ್ಲ ನಂಜು ಸರ್ವಜ್ಞ

ಹಾವಿನ ಹಲ್ಲು ವಿಷ, ಕತ್ತಿಯ ಮೊನೆ ವಿಷ, ಕರುಣೆಯಿಲ್ಲದವನ ಮಾತು ವಿಷ; ದುರ್ಜನರ ಇರುವೇ ವಿಷ.

821

ದಂತಪಂಕ್ತಿಯ ನಡುವೆ ಎಂತಿಪ್ಪುದದು ಜಿಹ್ವೆ ಅಂತು ದುರ್ಜನರ ಬಳಸಿನಲಿ ಸಜ್ಜನನು ನೋಡ ಸರ್ವಜ್ಞ

ಹಲ್ಲುಗಳ ಸಾಲಿನ ನಡುವೆ ನಾಲಿಗೆ ಹೇಗೆ ಎಚ್ಚರದಿಂದ ಬದುಕುತ್ತದೆಯೋ, ಹಾಗೆಯೇ ದುರ್ಜನರ ನಡುವೆ ಸಜ್ಜನನು ಎಚ್ಚರದಿಂದ ಬಾಳಬೇಕು.

823

ಒಳ್ಳಿದರ ಒಡನಾಡಿ ಕಳ್ಳನೊಳ್ಳಿದನಕ್ಕು ಒಳ್ಳಿದನು ಕಳ್ಳರೊಡನಾಡಿ ಅವ ಶುದ್ಧ ಕಳ್ಳ ತಾನಕ್ಕು ಸರ್ವಜ್ಞ

ಒಳ್ಳೆಯವರೊಡನೆ ಸೇರಿದರೆ ಕಳ್ಳನೂ ಒಳ್ಳೆಯವನಾಗುತ್ತಾನೆ; ಕಳ್ಳರೊಡನೆ ಸೇರಿದರೆ ಒಳ್ಳೆಯವನೂ ಕಳ್ಳನಾಗುತ್ತಾನೆ.

900

ಮುನ್ನ ತಾ ಸುಕೃತವ ಚೆನ್ನಾಗಿ ಮಾಡದಲೆ ಬನ್ನವ ಪಟ್ಟು ಬಯ್ಯಲ್ಕೆ ಶಿವನೇನು ಕನ್ನವಿಕ್ಕಿದನೆ? ಸರ್ವಜ್ಞ

ಮೊದಲು ಒಳ್ಳೆಯ ಕೆಲಸ ಮಾಡದೆ, ಕಷ್ಟ ಬಂದಾಗ ದೇವರನ್ನು ಬಯ್ದರೆ ಏನು ಫಲ? ದೇವರೇನು ನಿನ್ನ ಮನೆಗೆ ಕನ್ನ ಹಾಕಿದನೇ?

907

ಅಂತಕ್ಕು ಇಂತಿಕ್ಕು ಎಂತಿಕ್ಕು ಎನಬೇಡ ಚಿಂತಿಸಿ ದೇಹ ಬಡವಕ್ಕು, ಶಿವನಿರಸಿ ದಂತಿಹುದೆ ಲೇಸು ಸರ್ವಜ್ಞ

ಹಾಗಾದರೆ, ಹೀಗಾದರೆ, ಏನಾಗುತ್ತದೋ ಎಂದು ಚಿಂತಿಸಬೇಡ; ಚಿಂತೆಯಿಂದ ದೇಹ ಸೊರಗುತ್ತದೆ. ದೇವರು ಇರಿಸಿದಂತೆ ಇರುವುದೇ ಲೇಸು.

909

ವೇದವೇ ಹಿರಿದೆಂದು ವಾದವನು ಮಾಡುವಿರಿ ವೇದದಲೇನು ಅರಿದಿಹುದು? ಅನುಭವಿಯ ವೇದವೇ ವೇದ ಸರ್ವಜ್ಞ

ವೇದವೇ ದೊಡ್ಡದು ಎಂದು ವಾದ ಮಾಡುವಿರಿ; ವೇದದಲ್ಲಿ ಏನು ಅರ್ಥಮಾಡಿಕೊಂಡಿದ್ದೀರಿ? ಅನುಭವಿಯ ಅನುಭವವೇ ನಿಜವಾದ ವೇದ.

957

ಎಲುವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ ತೊಲೆಕಂಬವಿಲ್ಲ ಗಗನಕ್ಕೆ, ದೇವರಲಿ ಕುಲಭೇದವಿಲ್ಲ ಸರ್ವಜ್ಞ

ನಾಲಿಗೆಗೆ ಎಲುಬಿಲ್ಲ, ಬಡವನಿಗೆ ಬಲವಿಲ್ಲ, ಆಕಾಶಕ್ಕೆ ತೊಲೆ-ಕಂಬವಿಲ್ಲ; ಹಾಗೆಯೇ ದೇವರಲ್ಲಿ ಕುಲಭೇದವಿಲ್ಲ.

972

ನಡೆವುದೊಂದೇ ಭೂಮಿ ಕುಡಿವುದೊಂದೇ ನೀರು ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ ನಡುವೆ ಎತ್ತಣದು? ಸರ್ವಜ್ಞ

ನಡೆಯುವುದು ಒಂದೇ ಭೂಮಿ, ಕುಡಿಯುವುದು ಒಂದೇ ನೀರು, ಸುಡುವುದು ಒಂದೇ ಬೆಂಕಿ; ಹೀಗಿರುವಾಗ ಕುಲ-ಗೋತ್ರಗಳ ಭೇದ ನಡುವೆ ಎಲ್ಲಿಂದ ಬಂತು?

976

ಜಾತಿಹೀನರ ಮನೆಯ ಜೋತಿ ತಾ ಹೀನವೇ? ಜಾತಿ ವಿಜಾತಿಯೆನಬೇಡ, ದೇವನೊಲಿ ದಾತನೇ ಜಾತ! ಸರ್ವಜ್ಞ

ಕೆಳಜಾತಿಯೆಂದು ಕರೆಯುವವರ ಮನೆಯ ದೀಪದ ಬೆಳಕು ಕೀಳಾಗುತ್ತದೆಯೇ? ಜಾತಿ-ವಿಜಾತಿ ಎನ್ನಬೇಡ; ದೇವರು ಮೆಚ್ಚಿದವನೇ ಶ್ರೇಷ್ಠ.

982

ಉತ್ತಮದ ವರ್ಣಿಗಳೆ ಉತ್ತಮರು ಎನಬೇಡ ಮತ್ತೆ ತನ್ನಂತೆ ಬಗೆವರನೆಲ್ಲರನು ಉತ್ತಮರು ಎನ್ನು ಸರ್ವಜ್ಞ

ಮೇಲ್ವರ್ಗದಲ್ಲಿ ಹುಟ್ಟಿದವರು ಮಾತ್ರ ಉತ್ತಮರು ಎನ್ನಬೇಡ. ಎಲ್ಲರನ್ನೂ ತನ್ನಂತೆಯೇ ಕಾಣುವವರನ್ನು ಉತ್ತಮರೆನ್ನು.

1030

ಸಾವು ಜೀವಗಳೆರಡು ಭಾವಿಸಲು ಒಂದಯ್ಯ ಜೀವಿಸಲು ಬೀಜ ಸಾವಂತೆ ಜಗಹಿತಕೆ ಸಾವುದೇ ಜೀವ ಸರ್ವಜ್ಞ

ಸಾವು ಮತ್ತು ಬದುಕು ಆಲೋಚಿಸಿದರೆ ಒಂದೇ. ಬೀಜ ತಾನು ಮಣ್ಣಾಗಿ ಹೊಸ ಜೀವ ಕೊಡುವಂತೆ, ಜಗದ ಹಿತಕ್ಕಾಗಿ ತನ್ನನ್ನು ಅರ್ಪಿಸುವುದೇ ನಿಜವಾದ ಬದುಕು.

1031

ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ ಗೋರ್ಕಲ್ಲ ಮೇಲೆ ಮಳೆಹುಯಿದರಾ ಕಲ್ಲು ಹೀರ್ಕೊಂಬುದುಂಟೆ? ಸರ್ವಜ್ಞ

ಮೂರ್ಖನಿಗೆ ನೂರು ಬಾರಿ ಬುದ್ಧಿ ಹೇಳಿದರೂ, ಬಂಡೆಕಲ್ಲಿನ ಮೇಲೆ ಮಳೆ ಸುರಿದಂತೆ; ಆ ಕಲ್ಲು ನೀರನ್ನು ಹೀರುತ್ತದೆಯೇ?

1115

ಜಾಜಿಯ ಹೂ ಲೇಸು ತೇಜಿ ವಾಹನ ಲೇಸು ರಾಜಮಂದಿರದೊಳಿರ ಲೇಸು, ತಪ್ಪುಗಳ ಮಾಜುವದೆ ಲೇಸು ಸರ್ವಜ್ಞ

ಜಾಜಿ ಹೂ ಚೆಂದ, ಕುದುರೆ ಸವಾರಿ ಚೆಂದ, ಅರಮನೆಯ ವಾಸ ಚೆಂದ; ಆದರೆ ಎಲ್ಲಕ್ಕಿಂತ ಚೆಂದ ತಪ್ಪುಗಳನ್ನು ತಿದ್ದಿಕೊಳ್ಳುವುದು.

1170

ತೋಡಿರ್ದ ಬಾವಿಂಗೆ ಕೂಡಿರ್ದ ಜಲ ಸಾಕ್ಷಿ ಮಾಡಿರ್ದಕೆಲ್ಲ ಮನಸಾಕ್ಷಿ, ಸರ್ವಕು ಮೃಡನೆ ತಾ ಸಾಕ್ಷಿ! ಸರ್ವಜ್ಞ

ತೋಡಿದ ಬಾವಿಗೆ ಅದರಲ್ಲಿ ತುಂಬಿದ ನೀರೇ ಸಾಕ್ಷಿ; ನಾವು ಮಾಡಿದ ಎಲ್ಲದಕ್ಕೂ ಮನಸ್ಸೇ ಸಾಕ್ಷಿ; ಎಲ್ಲಕ್ಕೂ ದೇವರೇ ಸಾಕ್ಷಿ.

1172

ಸತ್ಯವೆಂಬುದು ತಾನು ನಿತ್ಯದಲಿ ಮೆರೆದಿಹುದು ಮಿತ್ಯಸತ್ಯವನು ಬೆರೆದರೂ ಇಹಪರದಿ ಸತ್ಯಕ್ಕೆ ಜಯವು ಸರ್ವಜ್ಞ

ಸತ್ಯ ಎಂದೆಂದಿಗೂ ಬೆಳಗುತ್ತಲೇ ಇರುತ್ತದೆ. ಸುಳ್ಳು ಅದರೊಡನೆ ಬೆರೆತರೂ, ಇಹದಲ್ಲೂ ಪರದಲ್ಲೂ ಕೊನೆಗೆ ಜಯ ಸತ್ಯಕ್ಕೇ.

1173

ಬತ್ತಿಯೆಣ್ಣೆಗಳೆರಡು ಹೊತ್ತಿ ಬೆಳಗುವ ತೆರದಿ ಸತ್ಯ ನೀತಿಗಳು ಬೆಳಗಿಹವು, ಜೋಡಗಲೆ ಕತ್ತಲೀ ಜಗವು ಸರ್ವಜ್ಞ

ಬತ್ತಿ ಮತ್ತು ಎಣ್ಣೆ ಸೇರಿ ದೀಪ ಬೆಳಗುವಂತೆ ಸತ್ಯ ಮತ್ತು ನೀತಿ ಸೇರಿ ಜಗತ್ತನ್ನು ಬೆಳಗುತ್ತವೆ; ಅವು ಅಗಲಿದರೆ ಜಗತ್ತೇ ಕತ್ತಲು.

1180

ದಿಟವೆ ಪುಣ್ಯದ ಪುಂಜ ಸಟೆಯೆ ಪಾಪದ ಬೀಜ ಕುಟಿಲ ವಂಚನೆಗೆ ಪೋಗದಿರು, ನಿಜದಿ ಪಿಡಿ ಘಟವನೆಚ್ಚರದಿ ಸರ್ವಜ್ಞ

ಸತ್ಯವೇ ಪುಣ್ಯದ ರಾಶಿ, ಸುಳ್ಳೇ ಪಾಪದ ಬೀಜ. ಕುಟಿಲ-ವಂಚನೆಗೆ ಹೋಗದೆ ನಿಜವನ್ನೇ ಹಿಡಿದು ಬಾಳನ್ನು ಎಚ್ಚರದಿಂದ ನಡೆಸು.

1222

ತಂದೆತಾಯಿಗಳ ಘನ ದಿಂದ ವಂದಿಸುವಂಗೆ ಬಂದ ಕುತ್ತಗಳು ಬಯಲಾಗಿ ಸ್ವರ್ಗವದು ಮುಂದೆ ಬಂದಕ್ಕು ಸರ್ವಜ್ಞ

ತಂದೆ-ತಾಯಿಯರನ್ನು ಗೌರವದಿಂದ ವಂದಿಸುವವನಿಗೆ ಬಂದ ಕಷ್ಟಗಳು ಕರಗಿಹೋಗುತ್ತವೆ; ಸ್ವರ್ಗ ಅವನ ಮುಂದೆ ಬರುತ್ತದೆ.

1226

ತೆಂಗಿಂಗೆ ಹಿರಿಯರಿಗೆ ಹಂಗು ಮಾಡಲೆ ಬೇಕು ತೆಂಗಿನ ಮೊದಲಿಂಗೆ ನೀರೆರೆಯೆ ತುದಿಯಲ್ಲಿ ಹಿಂಗದೀವಂತೆ ಸರ್ವಜ್ಞ

ತೆಂಗಿನ ಮರಕ್ಕೂ ಹಿರಿಯರಿಗೂ ಉಪಚಾರ ಮಾಡಬೇಕು. ತೆಂಗಿನ ಬುಡಕ್ಕೆ ನೀರೆರೆದರೆ ತುದಿಯಲ್ಲಿ ಎಳನೀರು ಕೊಡುವಂತೆ ಹಿರಿಯರೂ ಮರೆಯದೆ ಆಶೀರ್ವದಿಸುತ್ತಾರೆ.

1245

ಆರಯ್ದು ನುಡಿವವನು ಆರಯ್ದು ನಡೆವವನು ಆರಯ್ದು ಪದವನಿಡುವವನು ಲೋಕಕ್ಕೆ ಆರಾಧ್ಯನಕ್ಕು ಸರ್ವಜ್ಞ

ಯೋಚಿಸಿ ಮಾತನಾಡುವವನು, ಯೋಚಿಸಿ ನಡೆಯುವವನು, ಯೋಚಿಸಿ ಹೆಜ್ಜೆಯಿಡುವವನು ಲೋಕಕ್ಕೆ ಪೂಜ್ಯನಾಗುತ್ತಾನೆ.

1246

ಕೇಡನೊಬ್ಬಗೆ ಬಗೆದು ಕೇಡು ತಪ್ಪದು ತನಗೆ ನೋಡಿ ಕೆಂಡವನು ಹಿಡಿದೊಗೆಯೆ ತನ್ನ ಕೈ ಕೂಡ ಬೆಂದಂತೆ ಸರ್ವಜ್ಞ

ಇನ್ನೊಬ್ಬರಿಗೆ ಕೇಡು ಬಗೆದರೆ ಆ ಕೇಡು ತನಗೇ ತಪ್ಪದು. ಕೆಂಡವನ್ನು ಹಿಡಿದು ಬೇರೆಯವರ ಮೇಲೆ ಎಸೆದರೆ ಮೊದಲು ತನ್ನ ಕೈಯೇ ಸುಡುತ್ತದೆ.

1254

ತನ್ನ ದೋಷವ ನೂರ ಬೆನ್ನ ಹಿಂದಕೆ ಇರಿಸಿ ಅನ್ಯನೊಂದಕ್ಕೆ ಹುಲಿಯಪ್ಪ ಮಾನವನು ಕುನ್ನಿಯಲ್ಲೇನು? ಸರ್ವಜ್ಞ

ತನ್ನ ನೂರು ದೋಷಗಳನ್ನು ಬೆನ್ನ ಹಿಂದೆ ಮುಚ್ಚಿಟ್ಟು, ಇತರರ ಒಂದು ತಪ್ಪಿಗೆ ಹುಲಿಯಂತೆ ಎರಗುವವನು ನಾಯಿಯಲ್ಲವೇ?

1285

ಕತ್ತಿಯಲಾದ ಗಾಯ ಮತ್ತಿರದೆ ಮಾಯುವದು ಸುತ್ತಲಾಡುತಿಹ ಜಿಹ್ವೆಯ ಗಾಯವು ನಿತ್ಯಕು ಬಿಡದು ಸರ್ವಜ್ಞ

ಕತ್ತಿಯಿಂದಾದ ಗಾಯ ಸ್ವಲ್ಪ ಕಾಲದಲ್ಲೇ ಮಾಯುತ್ತದೆ; ಆದರೆ ನಾಲಿಗೆಯಿಂದಾದ ಗಾಯ ಎಂದಿಗೂ ಮಾಯುವುದಿಲ್ಲ.

1317

ವಿದ್ಯಕ್ಕೆ ಕಡೆಯಿಲ್ಲ ಬುದ್ಧಿಗೆ ಬೆಲೆಯಿಲ್ಲ ಛಿದ್ರಿಸುವವಗೆ ಗತಿಯಿಲ್ಲ, ಮರಣಕ್ಕೆ ಮದ್ದುಗಳಿಲ್ಲ ಸರ್ವಜ್ಞ

ವಿದ್ಯೆಗೆ ಕೊನೆಯಿಲ್ಲ, ಬುದ್ಧಿಗೆ ಬೆಲೆಕಟ್ಟಲಾಗದು, ಒಡಕು ತರುವವನಿಗೆ ಒಳ್ಳೆಯ ಗತಿಯಿಲ್ಲ, ಸಾವಿಗೆ ಮದ್ದಿಲ್ಲ.

1320

ಒಡಲೊಳಡಗಿದ ವಿದ್ಯೆ ಒಡಗೂಡಿ ಬರುತಿರಲು ಒಡಹುಟ್ಟಿದವರು, ಕಳ್ಳರು, ನೃಪರದನು ಪಡೆಯರೆಂತೆಂದ ಸರ್ವಜ್ಞ

ಮನಸ್ಸಿನೊಳಗೆ ಅಡಗಿರುವ ವಿದ್ಯೆ ಸದಾ ನಮ್ಮೊಡನೆ ಬರುತ್ತದೆ. ಅಣ್ಣ-ತಮ್ಮಂದಿರಾಗಲಿ, ಕಳ್ಳರಾಗಲಿ, ರಾಜರಾಗಲಿ ಅದನ್ನು ಕಸಿದುಕೊಳ್ಳಲಾರರು.

1322

ಇದ್ದಲ್ಲಿ ಸಲುವ ಹೋ ಗಿದ್ದಲ್ಲಿಯೂ ಸಲುವ ವಿದ್ಯವ ಕಲಿತ ಬಡವ ತಾ ಗಿರಿಯ ಮೇ ಲಿದ್ದರೂ ಸಲುವ ಸರ್ವಜ್ಞ

ವಿದ್ಯೆ ಕಲಿತವನು ಇದ್ದಲ್ಲೂ, ಹೋದಲ್ಲೂ ಮಾನ್ಯನಾಗುತ್ತಾನೆ. ಬಡವನಾದರೂ, ಬೆಟ್ಟದ ಮೇಲಿದ್ದರೂ ವಿದ್ಯಾವಂತನಿಗೆ ಬೆಲೆ ಇದ್ದೇ ಇರುತ್ತದೆ.

1325

ಉದ್ಯೋಗವುಳ್ಳವನ ಹೊದ್ದುವುದು ಸಿರಿ ಬಂದು ಉದ್ಯೋಗವಿಲ್ಲದಿರುವವನ ಕರದೊಳಗೆ ಇದ್ದುದೂ ಪೋಕು ಸರ್ವಜ್ಞ

ದುಡಿಮೆ ಮಾಡುವವನ ಬಳಿಗೆ ಸಂಪತ್ತು ತಾನಾಗಿಯೇ ಬರುತ್ತದೆ; ದುಡಿಯದವನ ಕೈಯಲ್ಲಿರುವುದೂ ಹೊರಟುಹೋಗುತ್ತದೆ.

1327

ಅಲಸಿಕೆಯಲಿರುವಂಗೆ ಕಲಸಲಂಬಲಿಯಿಲ್ಲ ಕೆಲಸಕ್ಕೆ ಅಲಸದಿರುವಂಗೆ ಬೇರಿಂದ ಹಲಸು ಕಾತಂತೆ ಸರ್ವಜ್ಞ

ಸೋಮಾರಿಗೆ ಕಲಸಿ ಕುಡಿಯಲು ಅಂಬಲಿಯೂ ಸಿಗದು; ಕೆಲಸದಲ್ಲಿ ಆಲಸ್ಯವಿಲ್ಲದವನಿಗೆ ಹಲಸಿನ ಮರ ಬುಡದಿಂದಲೇ ಕಾಯಿ ಬಿಟ್ಟಂತೆ ಫಲ ತುಂಬುತ್ತದೆ.

1329

ಬೆರೆವಂಗೆ ಭೋಗವೂ ಮೊರೆವಂಗೆ ರಾಗವೂ ಬರೆವಂಗೆ ಓದು ಬರುವಂತೆ ಸಾಧಿಪಗೆ ಬಾರದಿಹುದುಂಟೆ? ಸರ್ವಜ್ಞ

ಬೆರೆಯುವವನಿಗೆ ಸುಖ, ಅಭ್ಯಾಸ ಮಾಡುವವನಿಗೆ ಸಂಗೀತ, ಬರೆಯುವವನಿಗೆ ಓದು ಬರುವಂತೆ, ಸತತ ಸಾಧನೆ ಮಾಡುವವನಿಗೆ ಬಾರದ್ದು ಯಾವುದೂ ಇಲ್ಲ.

1341

ಮಾತು ಮಾತಿಗೆ ಆತು ಮಾತು ಕೋಟಿಗಳುಂಟು ಮಾತಾಡಿ ಮನಕೆ ಮುನಿಸಕ್ಕು, ಮಾತಿನಲಿ ಸೋತವನೆ ಜಾಣ ಸರ್ವಜ್ಞ

ಮಾತಿಗೆ ಮಾತು ಬೆಳೆಸಿದರೆ ಕೋಟಿ ಮಾತುಗಳಾಗುತ್ತವೆ, ಮನಸ್ಸು ಕೆಡುತ್ತದೆ. ವಾದದಲ್ಲಿ ಸೋತು ಸುಮ್ಮನಾಗುವವನೇ ಜಾಣ.

1342

ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಕೊಲೆಯು ಮಾತಿನಿಂ ಸರ್ವ ಸಂಪದವು ಲೋಕಕ್ಕೆ ಮಾತೆ ಮಾಣಿಕವು ಸರ್ವಜ್ಞ

ಮಾತಿನಿಂದ ನಗು-ಸ್ನೇಹ, ಮಾತಿನಿಂದಲೇ ಹಗೆ-ಕೊಲೆ, ಮಾತಿನಿಂದ ಎಲ್ಲ ಸಂಪತ್ತು. ಲೋಕಕ್ಕೆ ಮಾತೇ ಮಾಣಿಕ್ಯ.

1345

ಮೆಲ್ಲನೆಯೆ ಸುರಿ ನೀರು ಕಲ್ಲ ಭೇದಿಸಲಕ್ಕು ಸೊಲ್ಲರಿತು ನುಡಿವ ಒಳ್ಣುಡಿಯು ಬಲ್ಲಂದ ನಲ್ಲವೆನಿಸುವದು ಸರ್ವಜ್ಞ

ಮೆಲ್ಲನೆ ಸತತವಾಗಿ ಸುರಿಯುವ ನೀರು ಕಲ್ಲನ್ನೂ ಕೊರೆಯುತ್ತದೆ. ಸಮಯ ಅರಿತು ನುಡಿಯುವ ಮೃದುವಾದ ಒಳ್ಳೆಯ ಮಾತು ಎಲ್ಲರ ಮನ ಗೆಲ್ಲುತ್ತದೆ.

1354

ಮಾತಿಂಗೆ ಮಾತುಗಳು ಓತು ಸಾಸಿರವುಂಟು ಮಾತಾಡಿದಂತೆ ನಡೆದಾತ ಜಗವನ್ನು ಕೂತಲ್ಲಿ ಆಳ್ವ ಸರ್ವಜ್ಞ

ಮಾತಿಗೆ ಮಾತು ಸಾವಿರ ಇರಬಹುದು; ಆದರೆ ಆಡಿದಂತೆ ನಡೆಯುವವನು ಕುಳಿತಲ್ಲೇ ಜಗತ್ತನ್ನು ಆಳುತ್ತಾನೆ.

1389

ಸಾಲವನು ತರುವಾಗ ಹಾಲುಬೋನುಂಡಂತೆ ಸಾಲಿಗನು ಬಂದು ಕೇಳಿದರೆ ಕುಂಡೆಗೆ ಚೇಳು ಕಡಿದಂತೆ ಸರ್ವಜ್ಞ

ಸಾಲ ತೆಗೆದುಕೊಳ್ಳುವಾಗ ಹಾಲು-ಅನ್ನ ಉಂಡಷ್ಟು ಸುಖ; ಸಾಲ ಕೊಟ್ಟವನು ಮರಳಿ ಕೇಳಲು ಬಂದಾಗ ಚೇಳು ಕುಟುಕಿದಷ್ಟು ಸಂಕಟ.

1456

ಮುಟ್ಟಿದೆಡರಿಗೆ ಅಭಯ ಕೊಟ್ಟಾತ ದಾತಾರ ಕೆಟ್ಟ ಕಾರ್ಯವನು ತಿದ್ದಿದರೆ ಅವನೊಂದು ನೆಟ್ಟನೆ ದೈವ ಸರ್ವಜ್ಞ

ಕಷ್ಟದಲ್ಲಿರುವವರಿಗೆ ಅಭಯ ನೀಡುವವನೇ ದಾತಾರ; ಕೆಟ್ಟು ಹೋದ ಕೆಲಸವನ್ನು ಸರಿಪಡಿಸುವವನು ಸಾಕ್ಷಾತ್ ದೈವವೇ.

1459

ಜ್ಞಾನಿಯಜ್ಞಾನೆಂದು ಹೀನ ಜರಿದಡದೇನು ಶ್ವಾನ ತಾ ಬೊಗಳುತಿರಲಾನೆಯದನೊಂದು ಗಾನವೆಂದಂತೆ ಸರ್ವಜ್ಞ

ಹೀನ ಜನರು ಜ್ಞಾನಿಯನ್ನು ಅಜ್ಞಾನಿ ಎಂದು ಹೀಯಾಳಿಸಿದರೆ ಏನಾಯಿತು? ನಾಯಿ ಬೊಗಳಿದರೆ ಆನೆ ಅದನ್ನು ಒಂದು ಹಾಡು ಎಂದು ಕೇಳಿ ಮುಂದೆ ಸಾಗುತ್ತದೆ.

1472

ವ್ಯಸನದಲಿ ದೇಹವು ಮಸಣವನು ಕಾಣುವದು ವ್ಯಸನವನು ಬಿಟ್ಟು ಹಸನಾಗಿ ದುಡಿದರೆ ಅಶನ ವಸನಗಳು ಸರ್ವಜ್ಞ

ಚಟಗಳಿಂದ ದೇಹ ಬೇಗ ಮಸಣ ಕಾಣುತ್ತದೆ. ಚಟಗಳನ್ನು ಬಿಟ್ಟು ಶ್ರದ್ಧೆಯಿಂದ ದುಡಿದರೆ ಅನ್ನ-ಬಟ್ಟೆಗೆ ಕೊರತೆಯಿರುವುದಿಲ್ಲ.

1474

ಮನೆಯು ಬೆಂದರೆ ಸುಟ್ಟ ಮನುಜ ತಾ ಬೆಯ್ಯುವನೆ ಮನೆಯಲೆಲ್ಲವರು ಬೆಂದರೂ ತಣ್ಣಗಿಹ ಮನವೆ ನಿಜ ಮನೆಯು ಸರ್ವಜ್ಞ

ಮನೆ ಸುಟ್ಟರೆ ಮನುಷ್ಯನೂ ಸುಟ್ಟುಹೋಗುತ್ತಾನೆಯೇ? ಮನೆಯವರೆಲ್ಲ ಬೆಂದರೂ ತಣ್ಣಗಿರುವ ಶಾಂತ ಮನಸ್ಸೇ ನಿಜವಾದ ಮನೆ.

1478

ಆಡದಲೆ ಮಾಡುವನು ರೂಢಿಯೊಳಗುತ್ತಮನು ಆಡಿ ಮಾಡುವನು ಮಧ್ಯಮನು, ಅಧಮ ತಾ ನಾಡಿ ಮಾಡದನು ಸರ್ವಜ್ಞ

ಹೇಳದೆ ಮಾಡುವವನು ಉತ್ತಮ, ಹೇಳಿ ಮಾಡುವವನು ಮಧ್ಯಮ, ಹೇಳಿಯೂ ಮಾಡದವನು ಅಧಮ.

1511

ವಿದ್ಯ ಕಲಿಸದ ತಂದೆ ಬುದ್ಧಿ ಹೇಳದ ಗುರುವು ಬಿದ್ದಿರಲು ಬಂದು ನೋಡದ ತಾಯಿಯು ಶುದ್ಧ ವೈರಿಗಳು ಸರ್ವಜ್ಞ

ಮಕ್ಕಳಿಗೆ ವಿದ್ಯೆ ಕಲಿಸದ ತಂದೆ, ಬುದ್ಧಿ ಹೇಳದ ಗುರು, ಬಿದ್ದಾಗ ಬಂದು ನೋಡದ ತಾಯಿ; ಇವರು ನಿಜವಾದ ಶತ್ರುಗಳು.

1537

ಆಳಾಗ ಬಲ್ಲವನು ಆಳುವನು ಅರಸಾಗಿ ಆಳಾಗಿ ಬಾಳಲರಿಯದನು ಕಡೆಯಲ್ಲಿ ಹಾಳಾಗಿ ಹೋಹ ಸರ್ವಜ್ಞ

ಸೇವಕನಾಗಿ ಬಾಳಲು ಬಲ್ಲವನು ಮುಂದೆ ಒಡೆಯನಾಗಿ ಆಳುತ್ತಾನೆ; ಸೇವೆ ಮಾಡಲು ಕಲಿಯದವನು ಕೊನೆಗೆ ಹಾಳಾಗುತ್ತಾನೆ.

1551

ತಾಗುವ ಮುನ್ನವೆ ಬಾಗುವ ತಲೆ ಲೇಸು ತಾಗಿ ತಲೆಯೊಡೆದು ಕೆಲನಾದ ಬಳಿಕದರ ಭೋಗವೇನೆಂದ ಸರ್ವಜ್ಞ

ಡಿಕ್ಕಿ ಹೊಡೆಯುವ ಮುನ್ನವೇ ತಲೆ ಬಾಗಿಸುವುದು ಲೇಸು. ಡಿಕ್ಕಿ ಹೊಡೆದು ತಲೆ ಒಡೆದ ಮೇಲೆ ಬಾಗಿದರೆ ಏನು ಪ್ರಯೋಜನ?

1556

ಸಿರಿಯ ಸಂಸಾರವನು ಸ್ಥಿರವೆಂದು ನಂಬದಿರು ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ ಹರಿದು ಹೋದಂತೆ ಸರ್ವಜ್ಞ

ಸಂಪತ್ತು-ಸಂಸಾರಗಳನ್ನು ಶಾಶ್ವತವೆಂದು ನಂಬಬೇಡ. ಅದು ದೊಡ್ಡ ಸಂತೆ ಸೇರಿ ಒಂದು ಜಾವದಲ್ಲಿ ಚದುರಿಹೋದಂತೆ.

1564

ಊರೆಲ್ಲ ನೆಂಟರು ಕೇರಿಯೆಲ್ಲವು ಬಳಗ ಧಾರುಣಿಯು ಎಲ್ಲ ಕುಲದೈವವಾಗಿನ್ನು ಯಾರನ್ನು ಬಿಡಲೊ ಸರ್ವಜ್ಞ

ಊರೆಲ್ಲ ನೆಂಟರು, ಕೇರಿಯೆಲ್ಲ ಬಳಗ; ಭೂಮಿಯೇ ಕುಲದೇವತೆಯಾಗಿರುವಾಗ ಯಾರನ್ನು ಹೊರಗಿಡಲಿ?

2006

ಅನ್ನದೇವರ ಮುಂದೆ ಇನ್ನ ದೇವರು ಉಂಟೆ? ಅನ್ನವುಂಟಾದರುಣಲುಂಟು, ಜಗದೊಳಗೆ ಅನ್ನವೇ ದೈವ ಸರ್ವಜ್ಞ

ಅನ್ನದೇವರಿಗಿಂತ ಮಿಗಿಲಾದ ದೇವರು ಇದ್ದಾನೆಯೇ? ಅನ್ನವಿದ್ದರೆ ಉಣ್ಣಲು ಸಾಧ್ಯ; ಜಗತ್ತಿನಲ್ಲಿ ಅನ್ನವೇ ದೈವ.

2011

ಹಸಿಯದಿರೆ ಉಣಬೇಡ ಹಸಿದು ಮತ್ತಿರಬೇಡ ಬಿಸಿ ಬೇಡ ತಂಗೂಳುಣಬೇಡ ವೈದ್ಯನ ಗಸಣೆ ಬೇಡೆಂದ ಸರ್ವಜ್ಞ

ಹಸಿವಾಗದಿದ್ದರೆ ಉಣ್ಣಬೇಡ, ಹಸಿದಿದ್ದರೆ ಉಪವಾಸವಿರಬೇಡ; ಅತಿ ಬಿಸಿಯನ್ನೂ ತಂಗಳನ್ನೂ ತಿನ್ನಬೇಡ. ಹೀಗಿದ್ದರೆ ವೈದ್ಯನ ತಂಟೆಯೇ ಬೇಡ.

2016

ನಾಲಿಗೆಯ ಕಟ್ಟಿಹನು ಕಾಲನಿಗೆ ದೂರನಹ ನಾಲಿಗೆಯು ರುಚಿಯ ಮೇಲಾಡುತಿರಲವನ ಕಾಲ ಹತ್ತಿರವು ಸರ್ವಜ್ಞ

ನಾಲಿಗೆಯನ್ನು ಹತೋಟಿಯಲ್ಲಿಟ್ಟವನು ಸಾವಿನಿಂದ ದೂರವಿರುತ್ತಾನೆ; ರುಚಿಯ ಹಿಂದೆ ನಾಲಿಗೆ ಓಡುತ್ತಿದ್ದರೆ ಅವನ ಕೊನೆ ಹತ್ತಿರ.

2022

ಒಮ್ಮೆಯುಂಡವ ತ್ಯಾಗಿ ಇಮ್ಮೆಯುಂಡವ ಭೋಗಿ ಬಿಮ್ಮಗುಂಡವ ನೆರೆರೋಗಿ ಯೋಗಿ ತಾ ಸುಮ್ಮಗಿರುತಿಹನು ಸರ್ವಜ್ಞ

ದಿನಕ್ಕೆ ಒಮ್ಮೆ ಉಣ್ಣುವವನು ತ್ಯಾಗಿ, ಎರಡು ಬಾರಿ ಉಣ್ಣುವವನು ಭೋಗಿ, ಹೊಟ್ಟೆ ಬಿರಿಯುವಷ್ಟು ಉಣ್ಣುವವನು ರೋಗಿ; ಯೋಗಿ ಸುಮ್ಮನಿರುತ್ತಾನೆ.

About Sarvajna Tripadi

The Sarvajna Tripadi is a collection of three-line verses (tripadi) by Sarvajna, the 16th-century Kannada poet-philosopher, and this page gives a selection of them. In plain, witty Kannada drawn from village life, each verse ends with the poet's name, "Sarvajna", and teaches about devotion, honesty, pride, charity, food, friendship and caste. One verse asks, "Is Sarvajna one who became so through pride? He learned a word from each person, and so became a mountain of knowledge"; another says, "One who eats once is a renouncer, one who eats twice is a householder."

Written by: Sarvajna (16th century Kannada poet)

When to chant: In daily reading and reflection, in Kannada classrooms, and in talks on wisdom.

Did you know?

  • Sarvajna's name means "the all-knowing", which he explains humbly as knowledge gathered from everyone.
  • His verses are among the most quoted in Kannada, alongside the Vachanas of Basavanna.

Frequently asked questions

What is a tripadi?

A three-line verse form in Kannada.

When did Sarvajna live?

In the 16th century.

How did Sarvajna become "all-knowing", in his verse?

By learning a word from each person.

Offered for worship and study, not as prediction. Non-commercial.